ಬೈಕ್ ಟ್ಯಾಕ್ಸಿ ರೈಡರ್‌ಗಳಿಂದ ಸರ್ಕಾರಕ್ಕೆ ಬೆಂಬಲ

0
83

ಬೆಂಗಳೂರು, ಕರ್ನಾಟಕ – ಜೂನ್ 21, 2025: ಕರ್ನಾಟಕದಾದ್ಯಂತ ಸಾವಿರಾರು ಬೈಕ್ ಟ್ಯಾಕ್ಸಿ ರೈಡರ್ ಗಳು ಒಟ್ಟಿಗೆ ಆಗಮಿಸಿ ಸರ್ಕಾರವನ್ನು ಬೈಕ್ ಟ್ಯಾಕ್ಸಿಗಳಿಗೆ ಸೂಕ್ತ ನೀತಿಯನ್ನು ರೂಪಿಸುವಂತೆ ಕೋರಲಿದ್ದಾರೆ. ನೆರವಿಗಾಗಿ ಕೋರುತ್ತಿರುವ ಅವರು ತಮಗೆ ಮತ್ತೆ ಕೆಲಸ ಮಾಡಲು ಹಾಗೂ ಗಳಿಸಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಿದ್ದಾರೆ. ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ತುಮಕೂರು, ರಾಮನಗರ, ಶಿವಮೊಗ್ಗ ಮತ್ತು ಕನಕಪುರದಂತಹ ನಗರಗಳಿಂದ 5,000ಕ್ಕೂ ಹೆಚ್ಚು ರೈಡರ್ ಗಳು ಬೆಂಗಳೂರಿನ ವಿಧಾನಸೌಧಕ್ಕೆ ಪ್ರಯಾಣಿಸುತ್ತಿದ್ದು ಸರ್ಕಾರವನ್ನು ಬೈಕ್ ಟ್ಯಾಕ್ಸಿಗಳ ನಿಷೇಧಕ್ಕೆ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಲಿದ್ದಾರೆ. ಅವರಿಗೆ ಇದು ಬರೀ ಕೆಲಸದ ಕುರಿತಾಗಿ ಅಲ್ಲ-ಅವರ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ಈ ನಿಷೇಧವು 6 ಲಕ್ಷ ಬೈಕ್ ಟ್ಯಾಕ್ಸಿ ರೈಡರ್ ಗಳಿಗೆ ತೀವ್ರವಾದ ಪರಿಣಾಮ ಬೀರಿದ್ದು ಹಲವರಿಗೆ ಅವರ ಜೀವನ ನಡೆಸಲು ಯಾವುದೇ ಗಳಿಕೆ ಇಲ್ಲದಂತಾಗಿದೆ. ಕುಟುಂಬಗಳು ತಮ್ಮ ಆದಾಯಕ್ಕೆ ದಿನನಿತ್ಯದ ರೈಡ್ ಗಳ ಮೇಲೆ ಆಧಾರಪಟ್ಟಿದ್ದು ಈಗ ಅವರು ದೈನಂದಿನ ಊಟ ಹಾಗೂ ಮಕ್ಕಳ ಶುಲ್ಕ ಪಾವತಿಸಲು ಕಷ್ಟಪಡುತ್ತಿದ್ದಾರೆ. ಹಲವು ರೈಡರ್ ಗಳು ಬದುಕುವ ದಾರಿ ಗೊತ್ತಿಲ್ಲದೆ ಭರವಸೆ ಕಳೆದುಕೊಂಡಿದ್ದೇವೆ ಎನ್ನುತ್ತಾರೆ. ಅದೇ ಸಮಯಕ್ಕೆ ತ್ವರಿತ ಮತ್ತು ಕೈಗೆಟುಕುವ ಪ್ರಯಾಣಕ್ಕೆ ಬೈಕ್ ಟ್ಯಾಕ್ಸಿಗಳನ್ನು ಆಧರಿಸಿದ್ದ ಜನರು ಬಹಳ ಸಂಕಷ್ಟ ಅನುಭವಿಸುತ್ತಿದ್ದು ಹೆಚ್ಚಿನ ಶುಲ್ಕ ಮತ್ತು ಕೆಲವೇ ಆಯ್ಕೆಗಳನ್ನು ಹೊಂದಿದ್ದಾರೆ.

“ನಿಷೇಧಕ್ಕೆ ಮುನ್ನ ನಾನು ನನ್ನ ಕುಟುಂಬ ನಡೆಸಲು ಅಗತ್ಯವಿದ್ದಷ್ಟು ಹಣ ಗಳಿಸುತ್ತಿದ್ದೆ. ಈಗ ಯಾವುದೇ ಹಣ ಬರುತ್ತಿಲ್ಲ ಮತ್ತು ಪ್ರತಿನಿತ್ಯವೂ ಉಳಿವಿಗಾಗಿ ಹೋರಾಟದಂತೆ ಭಾಸವಾಗುತ್ತಿದೆ. ದಿನಸಿ ಕೊಳ್ಳಲು ಶಕ್ತಿ ಇಲ್ಲದ್ದರಿಂದ ನಾವು ಹಲವು ದಿನ ಊಟವಿಲ್ಲದೆ ಇದ್ದೆವು, ನನ್ನ ಮಕ್ಕಳ ಶಾಲೆಯ ಶುಲ್ಕ ಕಟ್ಟಲೂ ಹಣವಿಲ್ಲ. ಹೀಗಾದಲ್ಲಿ ನಾವು ಬದುಕುವುದಾದರು ಹೇಗೆ?” ಎಂದು ತುಮಕೂರಿನ ಬೈಕ್ ಟ್ಯಾಕ್ಸಿ ರೈಡರ್ ರಮೇಶ್ ಹೇಳುತ್ತಾರೆ.

“ನನಗೆ ಇಬ್ಬರು ಮಕ್ಕಳು ಹಾಗೂ ಪತ್ನಿ ನನ್ನ ಮೇಲೆ ಆಧಾರಪಟ್ಟಿದ್ದಾರೆ ಮತ್ತು ಈಗ ನಾನು ಹೇಗೆ ನಿರ್ವಹಿಸಬೇಕೆಂದು ಗೊತ್ತಾಗುತ್ತಿಲ್ಲ. ಬಾಡಿಗೆ ಬಾಕಿಯಾಗಿದೆ, ವಿದ್ಯುತ್ ಶುಲ್ಕ ಹೆಚ್ಚಾಗುತ್ತಿದೆ ಮತ್ತು ನಾನು ಜೀವನ ನಡೆಸಲು ಸಾಲಸೋಲ ಮಾಡಿ ಕಂಗಾಲಾಗಿದ್ದೇನೆ. ಈ ನಿಷೇಧವು ನಮ್ಮ ಉದ್ಯೋಗಗಳನ್ನು ಮಾತ್ರ ಕಿತ್ತುಕೊಂಡಿಲ್ಲ- ಇದು ನಮ್ಮ ಘನತೆಯನ್ನೇ ಕೊಂಡೊಯ್ದಿದೆ” ಎಂದು ಮೈಸೂರಿನ ಬೈಕ್ ಟ್ಯಾಕ್ಸಿ ರೈಡರ್ ರವಿ ಹೇಳುತ್ತಾರೆ.

ಬೈಕ್ ಟ್ಯಾಕ್ಸಿ ರೈಡರ್ ಗಳು ತಮ್ಮ ಕೆಲಸಕ್ಕೆ ಮರಳಲು ಸರ್ಕಾರವನ್ನು ಸುರಕ್ಷತೆ ಮತ್ತು ನಿಯಂತ್ರಣದ ಕಾಳಜಿಗಳ ಅನ್ವಯ ಸೂಕ್ತ ನೀತಿಯನ್ನು ತರಲು ಕೋರುತ್ತಿದ್ದಾರೆ. ಅವರು ಬೈಕ್ ಟ್ಯಾಕ್ಸಿಗಳು ಕರ್ನಾಟಕದ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು ಸಾವಿರಾರು ಮಂದಿಗೆ ಉದ್ಯೋಗಗಳನ್ನು ಒದಗಿಸುತ್ತಿವೆ ಎಂದು ಹೇಳಿದ್ದಾರೆ. ರೈಡರ್ ಗಳು ಸರಿಯಾದ ನಿಯಮಗಳನ್ನು ರೂಪಿಸಿದಲ್ಲಿ ಬೈಕ್ ಟ್ಯಾಕ್ಸಿಗಳು ಪ್ರತಿಯೊಬ್ಬರಿಗೂ ಅನುಕೂಲ ಒದಗಿಸುವುದನ್ನು ಮುಂದುವರಿಸುತ್ತವೆ ಎಂದು ನಂಬಿದ್ದಾರೆ.

ರೈಡರ್ ಗಳು ಭಾರತದಾದ್ಯಂತ ಬೈಕ್ ಟ್ಯಾಕ್ಸಿಗಳಿಗೆ ಈಗಾಗಲೇ ನೀತಿಗಳನ್ನು ಹೊಂದಿರುವ 19 ಇತರೆ ನಗರಗಳನ್ನು ಎತ್ತಿ ತೋರಿಸಿದ್ದು ಅಲ್ಲಿ ಅವರಿಗೆ ಸುರಕ್ಷಿತವಾಗಿ ಮತ್ತು ದಕ್ಷತೆಯಿಂದ ಕಾರ್ಯಾಚರಣೆ ಮಾಡಲು ಅವಕಾಶ ಕಲ್ಪಿಸಿವೆ. ಅವರು ದೇಶದ ಮುಂಚೂಣಿಯ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಏಕೆ ಅದೇ ರೀತಿ ನೀತಿ ರೂಪಿಸಲು ಸಾಧ್ಯವಾಗಿಲ್ಲ ಎಂದು ಕೇಳುತ್ತಿದ್ದಾರೆ. ರೈಡರ್ ಗಳ ಪ್ರಕಾರ ಸುರಕ್ಷತೆ ನೀಡುವ ಸ್ಪಷ್ಟ ನೀತಿಯು ಅವರಿಗೆ ಸುರಕ್ಷತೆ, ಕಾರ್ಯಾಚರಣೆಗಳ ನಿಯಂತ್ರಣ ಮತ್ತು ಘನತೆಯ ಜೀವನೋಪಾಯ ಗಳಿಸಲು ಮತ್ತೆ ಅವಕಾಶ ಕಲ್ಪಿಸುತ್ತದೆ ಎನ್ನುತ್ತಾರೆ.

“ಇದು ಬರೀ ಹಣ ಮಾಡುವುದಲ್ಲ” ಎಂದು ಮಂಡ್ಯದ ರೈಡರ್ ಪ್ರಿಯಾ ಹೇಳುತ್ತಾರೆ. “ಇದು ನಮ್ಮ ಕುಟುಂಬಗಳನ್ನು ಜೀವಂತವಾಗಿರಿಸುವುದು. ನಾವು ತಡವಾಗುವ ಮುನ್ನ ಆಲಿಸುವ ಮತ್ತು ಕ್ರಮ ತೆಗೆದುಕೊಳ್ಳುವ ಸರ್ಕಾರ ನಮಗೆ ಅಗತ್ಯವಿದೆ” ಎನ್ನುತ್ತಾರೆ.

ರೈಡರ್ ಗಳು ಅವರ ಶಾಂತಿಯುತ ರ‍್ಯಾಲಿಯು ಸರ್ಕಾರಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಒತ್ತಡ ಹೇರುತ್ತದೆ ಎಂದು ಭರವಸೆ ಹೊಂದಿದ್ದಾರೆ. ಬೈಕ್ ಟ್ಯಾಕ್ಸಿಗಳಿಲ್ಲದೆ ಅವರು ಅವರ ಆದಾಯ ಕಳೆದುಕೊಂಡಿದ್ದೇ ಅಲ್ಲದೆ ಅವರ ಘನತೆ ಮತ್ತು ಭರವಸೆಯನ್ನೂ ಕಳೆದುಕೊಂಡಿದ್ದಾರೆ. ಅವರಿಗೆ ಮತ್ತೆ ಕೆಲಸ ಮಾಡಲು ಅವಕಾಶ ಕಲ್ಪಿಸಿದರೆ ಯಾವುದೇ ನಿಯಮಗಳು ಅಥವಾ ಮಾರ್ಗಸೂಚಿಗಳನ್ನು ಅನುಸರಿಸಲು ಸಿದ್ಧ ಎನ್ನುತ್ತಾರೆ. ಅವರಿಗೆ ಇದು ಬರೀ ಕೆಲಸಗಳಿಗಿಂತ ಹೆಚ್ಚಿನದಾಗಿದ್ದು ಇದು ಅವರ ಜೀವನಗಳ ಮರು ನಿರ್ಮಾಣವಾಗಿದೆ.

ಪ್ರಮುಖಾಂಶಗಳು:

  • ಕರ್ನಾಟಕದ ಎಂಟು ನಗರಗಳಿಂದ 5,000ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ರೈಡರ್ ಗಳು ವಿಧಾನಸೌಧಕ್ಕೆ ರೈಡ್ ಮಾಡುತ್ತಿದ್ದು ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ.
  • ಈ ನಿಷೇಧವು 6 ಲಕ್ಷಕ್ಕೂ ಹೆಚ್ಚು ರೈಡರ್ ಗಳಿಗೆ ಆದಾಯವಿಲ್ಲದಂತೆ ಮಾಡಿದ್ದು ಗಂಭೀರ ಜೀವನೋಪಾಯದ ಬಿಕ್ಕಟ್ಟು ಸೃಷ್ಟಿಸಿದೆ.
  • ಕುಟುಂಬಗಳು ಆಹಾರ ಮತ್ತು ಶಾಲೆಯ ಶುಲ್ಕಗಳನ್ನು ಕಟ್ಟಲಾಗದೆ ಸಂಕಷ್ಟದಲ್ಲಿದ್ದು ಹಲವು ರೈಡರ್ ಗಳು ಭರವಸೆ ಕಳೆದುಕೊಂಡಿದ್ದಾರೆ.
  • ಸಂಚರಿಸುವವರು ಬೈಕ್ ಟ್ಯಾಕ್ಸಿಗಳಿಲ್ಲದೆ ಹೆಚ್ಚಿನ ಬಾಡಿಗೆಗಳು, ಒತ್ತಡದ ಟ್ರಾಫಿಕ್ ಮತ್ತು ಕೆಲವೇ ಆಯ್ಕೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
  • ರೈಡರ್ ಗಳು ಸರ್ಕಾರವನ್ನು ಅವರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸುವ ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ಪ್ರಯಾಣದ ಆಯ್ಕೆಗಳನ್ನು ಒದಗಿಸಲು ನ್ಯಾಯಯುತ ನೀತಿ ಸೃಷ್ಟಿಸಲು ಕೋರುತ್ತಿದ್ದಾರೆ.
  • ಭಾರತದಲ್ಲಿ 19 ಇತರೆ ರಾಜ್ಯಗಳು ಈಗಾಗಲೇ ಬೈಕ್ ಟ್ಯಾಕ್ಸಿಗಳ ನೀತಿಗಳನ್ನು ಹೊಂದಿವೆ ಮತ್ತು ರೈಡರ್ ಗಳು ಕರ್ನಾಟಕಕ್ಕೆ ಈ ಬಿಕ್ಕಟ್ಟನ್ನು ಪರಿಹರಿಸಲು ಅಂತಹುದೇ ನಿಯಮಗಳನ್ನು ಅಳವಡಿಸಿಕೊಳ್ಳಲು ಒತ್ತಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here