ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ನಡೆಸುತ್ತಿದ್ದು, 12 ಮಂದಿ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಗೆ ನೆರವು ನೀಡಿದವರ ಬಗ್ಗೆ ಆರೋಪಿಗಳಿಂದ ಎನ್ಐಎ ತಂಡ ಮಾಹಿತಿ ಕಲೆ ಹಾಕಿತ್ತಿದೆ.
ಬಂಧಿತ ಬಹುತೇಕ ಆರೋಪಿಗಳಿಗೆ ನಿಷೇಧಿತ ಪಿಎಫ್ಐ ಸಂಘಟನೆ ಜೊತೆ ನಂಟಿದೆ. ಅಲ್ಲದೆ, ಪಿಎಫ್ಐ ಜೊತೆ ಗುರುತಿಸಿಕೊಂಡು ವಿದೇಶದಲ್ಲಿರುವ ಕೆಲವರು ಇವರಿಗೆ ಹಣದ ನೆರವು ನೀಡಿದ್ದಾರೆ. ಜೊತೆಗೆ ಸುಹಾಸ್ ಶೇಟ್ಟಿ ಹತ್ಯೆಗೆ ನೆರವು ನೀಡಿದವರು ಮಂಗಳೂರು ಮತ್ತು ವಿದೇಶದಲ್ಲಿದ್ದು, ಅವರ ಹೆಸರುಗಳನ್ನು ಆರೋಪಿಗಳು ಎನ್ಐಎ ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಸದ್ಯ ಎನ್ಐಎ ಅಧಿಕಾರಿಗಳು ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಪಿಎಫ್ಐ ನಂಟಿನ ಬಗ್ಗೆ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ಸುಹಾಸ್ ಹತ್ಯೆಗೆ ವಿದೇಶದಿಂದ ಫಂಡಿಂಗ್ !
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ವಿದೇಶದಿಂದ ಹಣ ಸಂದಾಯವಾಗಿದೆ. ಸದ್ಯ ಎನ್ಐಎ ಅಧಿಕಾರಿಗಳು 12 ಆರೋಪಿಗಳ ಬ್ಯಾಂಕ್ ಖಾತೆ ವಿವರ ಸಂಗ್ರಹಿಸುತ್ತಿದ್ದಾರೆ. ಕೆಲ ಸ್ಥಳೀಯ ವ್ಯಕ್ತಿಗಳಿಂದಲೂ ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಎನ್ಐಎ ತನಿಖೆ ವೇಳೆ ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಎನ್ಐಎ DySP ಪವನ್ ಕುಮಾರ್ ನೇತೃತ್ವದ ತಂಡ ನಡೆಸುತ್ತಿದೆ.