ವಿದ್ಯಾರ್ಥಿ-ಪೋಷಕ ಸಮಾವೇಶ-2025

0
27

ಮಂಗಳೂರು: ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ(ರಿ.) ನಿಟ್ಟೆ ಹಾಗೂ ಸಹ ಸಂಸ್ಥೆಗಳಾದ ಶ್ರಿ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ, ವಿಶ್ವಕರ್ಮ ಯುವ ವೇದಿಕೆ ಇವರ ಸಹಯೋಗದಲ್ಲಿ 29-06-2025, ಭಾನುವಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣ ನಿಟ್ಟೆಯಲ್ಲಿ ವಿದ್ಯಾರ್ಥಿ-ಪೋಷಕ ಸಮಾವೇಶ-2025 ಯಶಸ್ವಿಯಾಗಿ ನಡೆಯಿತು. ಈ ಸಮಾವೇಶವು ಶಿಕ್ಷಣ, ಉನ್ನತ ಶಿಕ್ಷಣದ ಆಯ್ಕೆಗಳು, ಉನ್ನತ ಶಿಕ್ಷಣಕ್ಕೆ ಆರ್ಥಿಕ ಮಾರ್ಗಸೂಚಿ, ಕೌಟುಂಬಿಕ ಸಂಬAಧಗಳು, ಸಾಮಾಜಿಕ ಬದ್ಧತೆ, ಮುಂತಾದ ಮಹತ್ವದ ವಿಷಯಗಳ ಬಗ್ಗೆ ಉಪಾನ್ಯಾಸಗಳನ್ನು ಒಳಗೊಂಡಿತ್ತು. ಮಾತ್ರವಲ್ಲದೆ ಸಂಪನ್ಮೂಲ ವ್ಯಕ್ತಿಗಳು, ಪೋಷಕರು, ವಿದ್ಯಾರ್ಥಿಗಳ ನಡುವೆ ಸ್ಪಷ್ಟ ಸಂವಾದದ ವೇದಿಕೆಯಾಗಿತು.

ವಿಜಯ ಕುಮಾರ್, ಜಿಲ್ಲಾ ಯೋಜನಾ ನಿರ್ದೇಶಕರು, ಉಡುಪಿ. ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಸ್ವಂತ ಜೀವನದ ಯಶೋಗಾಥೆಯನ್ನು ಹಂಚಿಕೊಂಡ ಅವರು, ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಸಿನಲ್ಲಿ ಸ್ಪೂರ್ತಿಯ ಬೀಜ ಬಿತ್ತಿದರು. ಅವರ ಮಾತುಗಳು ಸಭಾಸದರ ಹೃದಯವನ್ನು ತಟ್ಟಿದವು, ಅರ್ಥಪೂರ್ಣ ತಾತ್ವಿಕತೆಯಿಂದ ಕೂಡಿದ್ದವು.

ಮುಖ್ಯ ಉಪನ್ಯಾಸಗಳು: ಡಾ. ಸುಧೀರ್ ರಾಜ್ ಕೆ. ಅವರ 40 ವರ್ಷಗಳ ಶಿಕ್ಷಣ ಹಾಗೂ ಹಣಕಾಸು ಅನುಭವದ ಶಕ್ತಿ ವೇದಿಕೆಯಲ್ಲಿ ಸ್ಪಷ್ಟವಾಗಿ ಪ್ರಭಾವ ಬೀರಿತು. “ಉನ್ನತ ಶಿಕ್ಷಣಕ್ಕೆ ಆದಾಯದ ಮೂಲಗಳು” ಎಂಬ ಅವರ ಉಪನ್ಯಾಸ, ವಿದ್ಯಾರ್ಥಿಗಳಿಗೂ ಪೋಷಕರಿಗೂ ತಮ್ಮ ಆರ್ಥಿಕ ಅಡಚಣೆಯನ್ನು ಮೆಟ್ಟಿನಿಂತು ಉನ್ನತ ಶಿಕ್ಷಣ ಪಡೆಯಲು ನಮಗಿರುವ ಅವಕಾಶಗಳ ಜಗತ್ತನ್ನೇ ಪರಿಚಯಿಸಿತು.
ಖ್ಯಾತ ಸಾಮಾಜಿಕ ಚಿಂತಕ ಮತ್ತು ಪ್ರಸಿದ್ಧ ವಾಗ್ಮಿ ದಾಮೋದರ್ ಶರ್ಮಾ ಅವರ ಮಾತುಗಳು ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳ ಕುರಿತಂತೆ ವಿದ್ಯಾರ್ಥಿಗಳ ಮತ್ತು ಪೋಷಕರ ಮನಸ್ಸಿನಲ್ಲಿ ಹೊಸ ಚಿಂತನೆಯನ್ನೇ ಹುಟ್ಟು ಹಾಕಿದ್ದಲ್ಲದೆ, ಅವರ ಮಾತುಗಳು ಕೇವಲ ಉಪದೇಶವಾಗಿರದೆ, ಬದುಕು ರೂಪಿಸುವ ಶಕ್ತಿಯಾಗಿತ್ತು.
ಯುವ ಶಿಕ್ಷಣ ಸಲಹೆಗಾರರಾದ ಅಕ್ಷತಾ ವಿ, “ಹತ್ತನೆಯ ನಂತರದ ದಾರಿ – ಕೋರ್ಸ್ ಆಯ್ಕೆ ಮತ್ತು ಉನ್ನತ ಶಿಕ್ಷಣದ ಅವಕಾಶಗಳು” ಎಂಬ ವಿಷಯದ ಬಗ್ಗೆ ಆಳವಾದ ಮಾಹಿತಿ ನೀಡಿದ ಅವರು, ವಿದ್ಯಾರ್ಥಿಗಳಲ್ಲಿ ಸ್ಪಷ್ಟತೆ ಮತ್ತು ಆತ್ಮವಿಶ್ವಾಸ ಮೂಡಿಸಿದರು. ಪೋಷಕರು ವಿದ್ಯಾರ್ಥಿಗಳ ಜೀವನದ ನಿರ್ಧಾರಗಳಲ್ಲಿ ಮಾರ್ಗದರ್ಶನ ನೀಡುವ ಅಗತ್ಯತೆ ಬಗ್ಗೆ ಮನವೊಲಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಕೆನರಾ ಬ್ಯಾಂಕ್, ನಿಟ್ಟೆ ಶಾಖೆಯ ಅಧಿಕಾರಿಗಳು ಸಂಪೂರ್ಣ ದಿನಪೂರ್ತಿ ಹಾಜರಿದ್ದು, ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲಗಳ ಸೌಲಭ್ಯಗಳ ಬಗ್ಗೆ ನೇರ ಸಂವಾದದ ಮೂಲಕ ಸಮಗ್ರ ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷರಾದ ಹರ್ಷವರ್ಧನ್ ನಿಟ್ಟೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಗಣ್ಯರನ್ನು ಸ್ವಾಗತಿಸಿದ ಹರ್ಷವರ್ಧನ್ ನಿಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ಮಗು ಶಿಕ್ಷಿತನಾದರೆ ಒಂದು ಮನೆ ಬೆಳಗುತ್ತದೆ, ಪ್ರತೀ ಮನೆ ಬೇಳಗಿದರೆ ಇಡಿ ಸಮಾಜವೇ ಬೆಳಗುತ್ತದೆ, ಸಮಾಜ ಬೆಳಗಿದರೆ ಊರೇ ಬೆಳಗುತ್ತದೆ. ವಿದ್ಯಾರ್ಥಿಗಳು ಅವಕಾಶಕ್ಕಾಗಿ ಕಾಯದೆ ಸದಾ ಸಿದ್ಧರಾಗಿರಬೇಕು, ಸಿದ್ಧತೆ ಮತ್ತು ಅವಕಾಶಗಳು ಸಂದಿಸಿದರೆ ಅದೇ ಅದೃಷ್ಟ, ಈ ನಿಟ್ಟಿನಲ್ಲಿ ಮಕ್ಕಳನ್ನು ಸಿದ್ಧಗೊಳಿಸುವುದೇ ನಮ್ಮ ಪ್ರಯತ್ನ ಎಂದರು.

ಈ ಕಾರ್ಯಕ್ರಮವು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ದಿಕ್ಕು ತೋರಿಸುವ ಉತ್ತಮ ದಾರಿದೀಪವಾಗಿದ್ದು, ನಿಟ್ಟೆ ವಿಶ್ವಕರ್ಮ ಸಂಘದ ಈ ಪ್ರಯತ್ನವು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಯಿತು.

ಉಡುಪಿ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟಿನ ಅಧ್ಯಕ್ಷರಾದ ಬಿ. ಅನಂತಯ್ಯ ಆಚಾರ್ಯ, ಅವಿಭಜಿತ ದ. ಕ. ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ಮುರಳೀಧರ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿ.ಎಲ್.ಎಸ್.ಐ ವಿಭಾಗದ ಮುಖ್ಯಸ್ಥೆ ಡಾ| ಸುಷ್ಮಾ ಪಿ. ಆಚಾರ್ಯ, ಕೆನರಾ ಬ್ಯಾಂಕ್  ಮ್ಯಾನೇಜರ್ ಶ್ರೀ ಲಿತಿನ್, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಮ್ಯಾನೇಜರ್ ದಿನೇಶ್ ಆಚಾರ್ಯ, ಸೂರ್ಯ ಪುರೋಹಿತ್, ನಿಟ್ಟೆ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣ ಆಚಾರ್ಯ, ಕಾರ್ಯದರ್ಶಿ ಮುರಳೀಧರ ಆಚಾರ್ಯ, ಕೋಶಾಧಿಕಾರಿ ಶ್ರೀಧರ ಆಚಾರ್ಯ ಕೆಮ್ಮಣ್ಣು, ಮಹಿಳಾ ಸಮಿತಿಯ ಅಧ್ಯಕ್ಷರಾದ ವತ್ಸಲಾ ಆಚಾರ್ಯ, ಯುವ ವೇದಿಕೆಯ ಅಧ್ಯಕ್ಷರಾದ ಪ್ರದೀಪ್ ಆಚಾರ್ಯ, ಯೋಗೀಶ್ ಆಚಾರ್ಯ ನಿಟ್ಟೆ, ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಸದಸ್ಯರಾದ ಈಶ್ವರ ಬಡಿಗೇರ ಧನ್ಯವಾದ ಸಮರ್ಪಿಸಿದರು, ಪ್ರಸಾದ್ ಆಚಾರ್ಯ, ಬರಂಗ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here