ಜುಲೈ 8 : ತುಳು ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ

0
22

    ಮಂಗಳೂರು:  ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ  ವತಿಯಿಂದ ಕಡಬ ತಾಲೂಕಿನ  ಶ್ರೀ ರಾಮಕುಂಜೇಶ್ವರ  ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಜುಲೈ 8ರಂದು ತುಳು ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧಾ ಕೂಟ ನಡೆಯಲಿದೆ.

ಇದೇ ಮೊದಲ ಬಾರಿಗೆ ತುಳು ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯನ್ನು ಆಯೋಜಿಸಲಾಗುತ್ತಿದೆ.  ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮದ  ಉದ್ಘಾಟನೆಯನ್ನು  ಕರ್ನಾಟಕ  ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಮಮತ ಡಿ.ಎಸ್. ಗಟ್ಟಿ ನಡೆಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ವಹಿಸಲಿರುವರು. ಸ್ಪರ್ಧಾ ಕಾರ್ಯಕ್ರಮದ ಸಹಭಾಗಿತ್ವ ವಹಿಸಿರುವ ನೇತ್ರಾವತಿ ತುಳುಕೂಟ ಅಧ್ಯಕ್ಷರಾದ ಕೆ. ಸೇಸಪ್ಪ ರೈ  ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ .ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ,  ರಾಮಕುಂಜ ಗ್ರಾಮ ಪಂಚಾಯತ್ ನ ಅಧ್ಯಕ್ಷೆ  ಸುಚೇತಾ ಬಿ,  ದಂತ ವೈದ್ಯರಾದ  ಡಾ. ರಾಜಾರಾಮ್ ಕೆ.ಬಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

        ಸಂಜೆ 4 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಕುಂಬ್ರ ದುರ್ಗಪ್ರಸಾದ್ ರೈ ಸಮಾರೋಪ ಭಾಷಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಿರುವರು. ಆಕಾಶವಾಣಿ ನಿವೃತ್ತ ನಿರ್ದೇಶಕರಾದ ಡಾ. ವಸಂತ ಕುಮಾರ್ ಪೆರ್ಲ, ತುಳು ಕೂಡುಕಟ್ಟ್ ಉಬಾರ್ ಇದರ ಅಧ್ಯಕ್ಷರಾದ ಡಾ. ನಿರಂಜನ ರೈ, ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯರಾದ ಸೂರಪ್ಪ ಕುಲಾಲ್ ಹಾಗೂ ಸಮರ್ಥ ಜನಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಗಿರಿಶಂಕರ್ ಸುಲಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಒಟ್ಟು 1,700 ವಿದ್ಯಾರ್ಥಿಗಳು  ತುಳು ಪಠ್ಯವನ್ನು ತೃತೀಯ ಭಾಷೆಯಾಗಿ ಅಧ್ಯಯನ ಮಾಡುತ್ತಿದ್ದಾರೆ ಎಂದು ತುಳು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here