ಮತಪಟ್ಟಿ ಪರಿಷ್ಕರಣೆ ಡ್ಯೂಟಿಯಿಂದ ಸಹ ಶಿಕ್ಷಕರನ್ನು ಕೈ ಬಿಡಿ: ಡಾ. ರಾಮಕೃಷ್ಣ ಶಿರೂರು ಮನವಿ

0
58

ಮೂಡುಬಿದಿರೆ: ಮತಪಟ್ಟಿ ಪರಿಷ್ಕರಣಾ ಕರ್ತವ್ಯದಿಂದ (ಬಿ. ಎಲ್.ಒ. ಡ್ಯೂಟಿ) ಪ್ರೌಢ ಶಾಲಾ ಸಹ ಶಿಕ್ಷಕರನ್ನು ಕೈ ಬಿಡುವಂತೆ ಮಾನ್ಯ ತಾಶಿಲ್ದಾರರಲ್ಲಿ ವಿನಂತಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ಡಾ. ರಾಮಕೃಷ್ಣ ಶಿರೂರು ತಿಳಿಸಿರುತ್ತಾರೆ.
ಪ್ರೌಢಶಾಲಾ ಸಹ ಶಿಕ್ಷಕರು ತಮ್ಮ ಬೋಧನಾ ಚಟುವಟಿಕೆಗಳ ಜೊತೆಯಲ್ಲಿ ಈಗಾಗಲೇ ಹತ್ತಾರು ಬೋಧನೇತರ ಕರ್ತವ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಹದಿಹರೆಯದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಬೋಧನೆ ಮತ್ತು ಮಾರ್ಗದರ್ಶನ ತುಂಬಾ ಅಗತ್ಯವಾಗಿರುತ್ತದೆ.
10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಇದ್ದು ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ತರುವ ಜವಾಬ್ದಾರಿ ಪ್ರೌಢಶಾಲಾ ಸಹ ಶಿಕ್ಷಕರ ಮೇಲಿದೆ. ಈಗಾಗಲೇ ಅಕ್ಷರ ದಾಸೋಹ, ವಿದ್ಯಾರ್ಥಿ ವೇತನ, ಎಫ್.ಎಲ್. ಎನ್. ವಿದ್ಯಾರ್ಥಿಗಳ ಬೋಧನೆ ಮತ್ತು ದಾಖಲೆ ನಿರ್ವಹಣೆ, ಇಲಾಖೆಯಿಂದ ನಡೆಸುವ ಪ್ರತಿಭಾ ಕಾರಂಜಿ, ಕ್ರೀಡಾಕೂಟ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ ಬಂದಿರುತ್ತಾರೆ. ಇವುಗಳ ಜೊತೆಯಲ್ಲಿ ಚುನಾವಣಾ ಮತಪಟ್ಟಿ ಪರಿಷ್ಕರಣೆಯ ಜವಾಬ್ದಾರಿಯನ್ನೂ ನೀಡುವುದರಿಂದ ಎಸ್. ಎಸ್. ಎಲ್. ಸಿ. ಪರೀಕ್ಷಾ ಪಲಿತಾಂಶದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ. ಆದುದರಿಂದ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಫಲಿತಾಂಶ ನೀಡುವ ದೃಷ್ಟಿಯಿಂದ ಮತಪಟ್ಟಿ ಪರಿಷ್ಕರಣೆ ಕರ್ತವ್ಯದಿಂದ ಪ್ರೌಢಶಾಲಾ ಸಹ ಶಿಕ್ಷಕರನ್ನು ಕೈಬಿಡಬೇಕೆಂದು ಮೂಡುಬಿದಿರೆ ತಾಲೂಕು ತಹಶೀಲ್ದಾರರಲ್ಲಿ ವಿನಂತಿಸಿಕೊಳ್ಳಲಾಗಿದೆ ಎಂದು ಅವರು ಪತ್ರಿಕೆಗೆ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here