ದಾವಣಗೆರೆ, ಜು. 20, ಕವಿಗಳು ಸಿನಿಮಾಗೆ, ಚಿತ್ರಕ್ಕೆ, ಕಾವ್ಯಕ್ಕೆ ಹಾಡು ಬರೆದಾಗ ಅದರಲ್ಲಿ ಒಂದು ದಿವ್ಯ ಸಂದೇಶ ಇರುತ್ತದೆ. ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಇಂತಹ ಪ್ರತಿಭಾನ್ವಿತ ಮಕ್ಕಳ ಬೆಳವಣಿಗೆಗೆ ಪ್ರೋತ್ಸಾಹ ವನ್ನು ನೀಡುವ ಸಂಸ್ಥೆಗಳು ಬಹಳಷ್ಟಿವೆ ಇಲ್ಲಿ ಪ್ರಶಸ್ತಿ ಸ್ವೀಕರಿಸಲು ಬರೀ ದಾವಣಗೆರೆ ಅಲ್ಲ, ರಾಜ್ಯದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಕೆಲವು ಸಂಸ್ಥೆಗಳು ಒಂದೆರಡು ವರ್ಷ ಮಾಡಿ ನಿಲ್ಲಿಸಿ ಬಿಡುತ್ತವೆ. ಇಡೀ ಕರ್ನಾಟಕವನ್ನು ನಮ್ಮ ಕರ್ನಾಟಕ ಎಂಬ ಭಾವನೆಯೊಂದಿಗೆ ನಮ್ಮ ನಾಡು, ನುಡಿ, ಸಂಸ್ಕೃತಿಗಾಗಿ ಸೇವೆ ಸಲ್ಲಿಸುತ್ತಿರುವ ಕಲಾಕುಂಚ ಸಂಸ್ಥೆಗೆ ಅಭಿನಂದನೆ ಸಲ್ಲಿಸದಿದ್ದರೆ ತಪ್ಪಾಗುತ್ತದೆ ಎಂದು ಬೆಂಗಳೂರಿನ ಹಿರಿಯ ಗಾಯಕ ಪುತ್ತೂರು ನರಸಿಂಹ ನಾಯಕ್ ಹೇಳಿದರು.
ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ 2024-25ನೇ ಸಾಲಿನ ಎಸ್ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭಉದ್ಘಾಟಿಸಿ ಆ ವ೦ ಮಾತನಾಡಿದರು. ಇದು ಜೀವನದ ಪ್ರಾರಂಭ, ಇಲ್ಲಿಂದ ನಾವು ಹಲವಾರು ಪ್ರಶಸ್ತಿಗಳನ್ನು ಪಡೆಯಬೇಕು. ಕೇವಲ ವಿದ್ಯೆಯಲ್ಲಿ ಅಲ್ಲ, ಜೀವನದ ಪ್ರಶಸ್ತಿಗಳನ್ನು ಗೆಲ್ಲಬೇಕು. ನಾವು ಯಾವುದೇ ಮನೆಯಲ್ಲಿರಲಿ ಅಲ್ಲಿ ನಡೆದುಕೊಳ್ಳುವ ರೀತಿ, ಆರ್ಥಿಕ ಶಿಸ್ತು, ಸಾಮಾಜಿಕ ಶಿಸ್ತು, ನಮ್ಮ ನಾಡು ನುಡಿ ನಮ್ಮ ಸಂಸ್ಕೃತಿ ಬಗ್ಗೆ ಇರುವ ಪ್ರೀತಿ ಇದೆಲ್ಲಾ ನಮ್ಮ ಜೀವನವನ್ನು ಒಂದು ರೀತಿಯಲ್ಲಿ ಸುಂದರವಾಗಿ ರೂಪಿಸುತ್ತದೆ. ಜೀವನ ಕಲಿಸುವ ಪಾಠದಲ್ಲಿ ನಾವು ಗೆದ್ದಾಗ ಅದು ದೊಡ್ಡ ಪ್ರಶಸ್ತಿ ನಾವು ಶಾಲೆ, ಕಾಲೇಜುಗಳಲ್ಲಿ ಎಷ್ಟು ಪ್ರಶಸ್ತಿ ಪಡೆಯುತ್ತೇವೆಯೋ ಅದು ಒಂದು ಬಾರಿ ವಿದ್ಯಾಭ್ಯಾಸ ಮುಗಿದು ಒಂದು ಪದವಿ ಬಂದ ಮೇಲೆ ಅಲ್ಲಿಗೆ ನಿಲ್ಲುತ್ತದೆ. ಆದರೆ ಜೀವನದ ಪಾಠ ಪ್ರತಿದಿನ ನಡೆಯುತ್ತದೆ. ಕವಿ, ವಕೀಲ, ಡಾಕ್ಟರ್, ಗಾಯಕ ನಾದರೂ ಸರಿ, ಏನಾದರೂ ಆಗು ಮೊದಲು ಮಾನವನಾಗು, ಅದಕ್ಕಿಂತ ದೊಡ್ಡ ಪ್ರಶಸ್ತಿ ದೊಡ್ಡದಿಲ್ಲ.
ಆ ಮಾನವನಾಗುವ ಪ್ರಯತ್ನದಲ್ಲಿ ನಾವೆಲ್ಲರೂ ಗೆಲ್ಲೋಣ. ನಿಮ್ಮ ಜೀವನದಲ್ಲಿ ಶಿಸ್ತನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಿ, ಖಂಡಿತ ವಾಗಿಯೂ ಜೀವನ ನಿಮ್ಮ ಕೈ ಬಿಡುವುದಿಲ್ಲ. ಯಾರು ಕಷ್ಟ ಪಡುತ್ತಾರೋ ಅವರು ಜೀವನದಲ್ಲಿ ಮುಂದೆ ಇಷ್ಟವನ್ನೂ ಅನುಭವಿ ಸುತ್ತಾರೆ. ಆ ಇಷ್ಟವನ್ನು ಕಷ್ಟ ಪಟ್ಟಾಗ ಇಷ್ಟ ಇನ್ನಷ್ಟು ಗಟ್ಟಿಯಾಗುತ್ತದೆ. ಸುಲಭದಲ್ಲಿ ಬಂದ ಯಾವ ಸುಖವೂ ಶಾಶ್ವತವಲ್ಲ, ಕಷ್ಟಪಟ್ಟು ಗಳಿಸಿದ ಒಂದು ದಾರಿ. ಗುರಿ ಯಾವತ್ತೂ ಶಾಶ್ವತ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ನಿಮ್ಮ ಇಂದಿನ ಪ್ರಶಸ್ತಿಗಳು, ಕಿರೀಟಗಳು ಮುಂದಿನ ಪೀಳಿಗೆಗೆ ಆದರ್ಶಪ್ರಾಯ, ಮಾರ್ಗ ದರ್ಶಕವಾಗಿರಬೇಕು. ಕನ್ನಡದಲ್ಲಿ 125ಕ್ಕೆ 125 ಅಂಕಗಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕನ್ನಡ ಅಂದರೆ ನಮ್ಮ ಕಾಲದಲ್ಲಿ ಕಬ್ಬಿಣದ ಕಡಲೆ ಎಂದುಕೊಂಡಿದ್ದರು. ಆದರೆ ಇಂದಿನ ಮಕ್ಕಳು ಅಂಕಗಳಿಸುವ ಮೂಲಕ ನಿಮ್ಮ ಬುದ್ದಿವಂತಿಗೆ ಎಷ್ಟು ಮುಂದುವರೆದಿದೆ ಎಂಬುದನ್ನು ಆಲೋಚಿಸಬೇಕಾಗಿದೆ. ನೀವು ಎಲ್ಲಿಯಾ ಹೋಗಿರಿ, ಯಾವುದೇ ವಿದೇಶದಲ್ಲಿ ಇರಿ. ನೀವು ಕನ್ನಡತನವನ್ನು ಮರೆಯಬೇಡಿ. 8 ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂದರೆ ಅದು ನಮ್ಮ ನಿಮ್ಮೆಲ್ಲರ ಕನ್ನಡದಲ್ಲಿ ಮಾತ್ರ ಸಾಧ್ಯ. ವಿಶ್ವದಲ್ಲಿಯೇ ಸುಂದರ ಲಿಪಿಯಾಗಿ ರಾಣಿ ಯಾಗಿದೆ ಎಂದರೆ ಅದು ಕನ್ನಡ ಲಿಪಿ ಎಂದರು.
ಉತ್ತಮ ಅಂಕಗಳಿಸಿ ಗೌರವ ಸ್ವೀಕರಿಸಿರುವ ನೀವು ಮುಂದೆ ಉತ್ತಮ ಸ್ಥಾನ ಗಳಿಸುತ್ತೀರಿ. ಆಗ ನಿಮಗೆ ಸಾಕಿ ಪೋಷಣೆ ಮಾಡಿದ ತಂದೆ-ತಾಯಿ, ಪಾಠ ಕಲಿಸಿದ ಗುರುಗಳಿಗೆ, ನಿಮ್ಮ ಬೆಳವಣಿಗೆಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಕಲಾಕುಂಚ ಸಂಸ್ಥೆ, ಶ್ರೀಮತಿ ಸರಸ್ವತಿ ದಾಸಪ್ಪ ಶೇಕ್ಕೆ ಪ್ರತಿಷ್ಠಾನದ ಸಂಸ್ಥಾಪಕ, ಸಾಲಿಗ್ರಾಮ ಗಣೇಶ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶಶೆಣೈ, ಸಂಸ್ಥೆ ಅಧ್ಯಕ್ಷ ಕೆ.ಎಚ್.ಮಂಜುನಾಥ, ವಾಸಂತಿ ಮಂಜುನಾಥ, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ, ಉಡುಪಿಯ ನೃತ್ಯ ಕಲಾವಿದೆ ಶ್ರೇಷ್ಠ ರಾಮಚಂದ್ರ ದೇವಾಡಿಗ, ಪದಾಧಿಕಾರಿಗಳು, ಇತರರು ಇದ್ದರು. ರಾಜ್ಯದ ವಿವಿಧೆಡೆಯಿಂದ ಪ್ರಶಸ್ತಿ ಸ್ವೀಕರಿಸಲು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಗಮಿಸಿದ್ದರು.