ಧಾರವಾಡದಲ್ಲಿ ಮಹಾಕವಿ ಕುಮಾರವ್ಯಾಸ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ: ಕನ್ನಡ ಸಾಹಿತ್ಯದಲ್ಲಿ ನಡುಗನ್ನಡ ಕಾಲ ವೈವಿಧ್ಯಮಯ ಸಾಹಿತ್ಯದಿಂದ ಕೂಡಿದ ಕಾಲ. ಹರಿಹರ, ರಾಘವಾಂಕ, ಲಕ್ಷ್ಮೀಶ, ಕುಮಾರ ವಾಲ್ಮೀಕಿ, ಕುಮಾರವ್ಯಾಸ ಮುಂತಾದ ನಡುಗನ್ನಡ ಕವಿಗಳು ಜನಸಾಮಾನ್ಯರಿಗೂ ಅರ್ಥವಾಗುವ ಸರಳ ಕನ್ನಡದಲ್ಲಿ ಆ ಕಾಲದ ಛಂದೋಬದ್ಧವಾದ ಶೈಲಿಯಲ್ಲಿ ಕಾವ್ಯ ರಚನೆ ಮಾಡಿದ್ದಾರೆ. ಗದುಗಿನ ಭಾರತ ವನ್ನು ರಚಿಸಿದ ರೂಪಕ ಸಾಮ್ರಾಜ್ಯ ಚಕ್ರವರ್ತಿಮಹಾಕವಿ ಕುಮಾರವ್ಯಾಸ ನಡುಗನ್ನಡ ಕಾಲದ ಮಹಾಕವಿಯಾಗಿದ್ದಾನೆ ಎಂದು ಮೂಡುಬಿದಿರೆಯ ಅಧ್ಯಾಪಕ, ಸಾಹಿತಿ ಡಾ. ರಾಮಕೃಷ್ಣ ಶಿರೂರು ತಿಳಿಸಿದರು. ಅವರು ಧಾರವಾಡದ ರಂಗಾಯಣದ ಸಭಾಭವನದಲ್ಲಿ ನಡೆದ ಮಹಾಕವಿ ಕುಮಾರವ್ಯಾಸ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಅಕ್ಷರದೀಪ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಪ್ರವೀಣ್ ಕುಮಾರ್ ಕನ್ಯಾಳ ಅವರ ಸಾಹಿತ್ಯ ಸೇವೆ ಅಮೋಘವಾದುದು. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕಾರ್ಯವನ್ನು ಅಕ್ಷರ ದೀಪ ಸಾಹಿತ್ಯ ಪ್ರತಿಷ್ಠಾನ ನಡೆಸುತ್ತಾ ಬಂದಿದೆ. ಅವರ ನಾಡು ನುಡಿಯ ಸೇವೆ, ಕನ್ನಡದ ಮನಸ್ಸನ್ನು ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ಕೈ ಜೋಡಿಸೋಣ, ಬೆಂಬಲಿಸೋಣ ಎಂದು ಅವರು ಶುಭ ಹಾರೈಸಿದರು.
ಅಕ್ಷರ ದೀಪ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಪ್ರವೀಣ್ ಕುಮಾರ್ ಕನ್ಯಾಳ, ಪಾರಂಪರಿಕ ವೈದ್ಯರಾದ ಡಾ. ಎಸ್. ಜಿ. ಅಂಟಿನ ಮಠ, ಸವದತ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ವೈ.ಎಂ. ಯಾಕೊಳ್ಳಿ, ಸೌದತ್ತಿಯ ಖ್ಯಾತ ನ್ಯಾಯವಾದಿಗಳಾದ ಬಸವರಾಜ ಸಿ. ಯರಗಣವಿ,ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರತ್ನಾಬದಿ, ಕನ್ನಡಾಧ್ಯಾಪಕರೂ, ಸಾಹಿತ್ಯ ಸಂಘಟಕರೂ ಆಗಿರುವ ಗಣಪತಿ ಹೆಗಡೆ ದಾಂಡೇಲಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಕವಿ ಕುಮಾರವ್ಯಾಸ ರಾಷ್ಟ್ರಪ್ರಶಸ್ತಿಯನ್ನು ಹಲವು ಸಾಧಕರಿಗೆ ನೀಡಿ ಗೌರವಿಸಲಾಯಿತು.