ಪೂರ್ವ ಕಾಂಗೋದಲ್ಲಿ ಕ್ಯಾಥೋಲಿಕ್ ಚರ್ಚ್ ಮೇಲೆ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಬಂಡುಕೋರರು ಮಧ್ಯರಾತ್ರಿ ದಾಳಿ ಮಾಡಿದ್ದು, ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಪೂರ್ವ ಕಾಂಗೋ ಪಟ್ಟಣದ ಕೊಮಾಂಡಾದಲ್ಲಿರುವ ಚರ್ಚ್‌ಗೆ ದಾಳಿಕೋರರು ರಾತ್ರಿ 1 ಗಂಟೆ ಸುಮಾರಿಗೆ ನುಗ್ಗಿದ್ದು, ದಾಳಿಕೋರರು ಹಲವಾರು ಮನೆಗಳು ಮತ್ತು ಅಂಗಡಿಗಳನ್ನು ಸುಟ್ಟುಹಾಕಿದ್ದಾರೆ ಎನ್ನಲಾಗಿದೆ.
ಎರಡು ಕಡೆ ಬಂಡುಕೋರರ ದಾಳಿ
ದಾಳಿ ಸ್ಥಳದ ವಿಡಿಯೋ ದೃಶ್ಯಗಳು ಆನ್ಲೈನ್ನಲ್ಲಿ ಹರಿದಾಡುತ್ತಿವೆ. ಹತ್ತಿರದ ಮಚೊಂಗನಿ ಗ್ರಾಮದಲ್ಲಿ ಈ ಹಿಂದೆ ನಡೆದ ದಾಳಿಯಲ್ಲಿ 5 ಜನರು ಸಾವನ್ನಪ್ಪಿದ್ದರು. ಎರಡೂ ದಾಳಿಗಳನ್ನು ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಬಂಡುಕೋರ ಗುಂಪು ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ಎಡಿಎಫ್) ಸದಸ್ಯರೇ ನಡೆಸಿದ್ದಾರೆ ಎನ್ನಲಾಗ್ತಿದೆ.
43 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ
ಇಟುರಿಯಲ್ಲಿರುವ ಕಾಂಗೋಲೀಸ್ ಸೇನೆಯ ವಕ್ತಾರ ಲೆಫ್ಟಿನೆಂಟ್ ಜೂಲ್ಸ್ ನ್ಗೊಂಗೊ, ಕೊಮಂಡಾ ಚರ್ಚ್ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಭದ್ರತಾ ಮೂಲಗಳನ್ನ ಉಲ್ಲೇಖಿಸಿ ವಿಶ್ವಸಂಸ್ಥೆಯ ಬೆಂಬಲಿತ ರೇಡಿಯೋ ಒಕಾಪಿ ವರದಿ ಮಾಡಿದ್ದು, 43 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ದಾಳಿಕೋರರು ಕೊಮಂಡಾದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ನೆಲೆಯಿಂದ ಬಂದಿದ್ದು, ಭದ್ರತಾ ಪಡೆಗಳು ಬರುವ ಮೊದಲು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.