ವೇಣೂರು: ಬೆಳ್ತಂಗಡಿ ತಾಲೂಕಿನ ಮರೋಡಿಯ ವಿವಾಹಿತ ಮಹಿಳೆ ವಾಣಿಶ್ರೀ ಅನಾರೋಗ್ಯಕ್ಕೆ ತುತ್ತಾಗಿ ಸೋಮವಾರ ಸಾವನ್ನಪ್ಪಿದ್ದು, ಈ ಸಾವಿನಲ್ಲಿ ಆಕೆಯ ಪತಿಯ ಬಗ್ಗೆ ತಮಗೆ ಸಂಶಯವಿದ್ದು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಹೆತ್ತವರು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೊಸ್ಮಾರು ಈದುವಿನ ವಾಣಿಶ್ರೀಯನ್ನು ಕಳೆದ 1.3 ವರ್ಷದ ಹಿಂದೆ ಬೆಳ್ತಂಗಡಿ ತಾಲೂಕು ಮರೋಡಿ ಗ್ರಾಮದ ಪಚ್ಚಾಡಿ ಪ್ರಶಾಂತ್ ಕೋಟ್ಯಾನ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಆಕೆಯ ಪತಿ ಪ್ರಶಾಂತ್ ಕೋಟ್ಯಾನ್ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಸಂಶಯದಲ್ಲಿ ಗಂಡ ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರದಲ್ಲಿ ವಾಣಿಶ್ರೀ ಮಾನಸಿಕವಾಗಿ ಕುಗ್ಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಈ ಸಂದರ್ಭ ಆಕೆಯನ್ನು ಯಾರೂ ಚಿಕಿತ್ಸೆಗೆ ಒಳಪಡಿಸಿಲ್ಲ ಅನ್ನುವ ಆರೋಪವೂ ಕೇಳಿ ಬಂದಿದೆ.
ಸೋಮವಾರ ಆಕೆಯ ಹೆತ್ತವರು ಮೊಬೈಲ್ ಕರೆ ಮಾಡಿದಾಗ ವಿಷಯ ಗೊತ್ತಾಗಿದ್ದು ,ತಕ್ಷಣ ಆಕೆಯನ್ನು ಹೊಸ್ಮಾರುವಿನಲ್ಲಿರುವ ಪ್ರಸಾದ್ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದು, ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೂಡುಬಿದಿರೆಯ ಜಿ.ವಿ.ಪೈ. ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಾಣಿಶ್ರೀ ಉಸಿರು ನಿಲ್ಲಿಸಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 16-2025 ಕಲಂ: 194(3)(iv) ಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.