ಆ.1-7: ವಿಶ್ವ ಸ್ತನ್ಯಪಾನ ಸಪ್ತಾಹ ವಿಶೇಷ; ಡಾ. ಮುರಲೀ ಮೋಹನ್ ಚೂಂತಾರುರವರ ಲೇಖನ

0
35

ಎದೆ ಹಾಲುಣಿಸುವಿಕೆ ಎನ್ನುವುದು ತಾಯಿಯ ಪ್ರಾಥಮಿಕ ಜವಾಬ್ದಾರಿ ಮತ್ತು ಜನ್ಮಸಿದ್ದ ಹಕ್ಕು. ‘ಸ್ತನ್ಯಪಾನದಿಂದ ಉಂಟಾಗುವ ಧನಾತ್ಮಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್ ಮೊದಲ ವಾರದಂದು ವಿಶ್ವದಾದ್ಯಂತ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ. ನವಜಾತ ಶಿಶುಗಳಿಗೆ ತಾಯಿಯ ಮೊಲೆ ಹಾಲೇ ಆಹಾರ ಮತ್ತು ಅಮ್ರತ. ಮಗುವಿನ ದೈಹಿಕ, ಮಾನಸಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳು, ಪೌಷ್ಟಿಕಾಂಶ ಗಳು ಹಾಗೂ ಆಂಟಿಬಾಡಿಗಳು ಮೊಲೆ ಹಾಲಿನಲ್ಲಿ ಇರುವ ಕಾರಣ ದಿಂದ ಸ್ತನ್ಯಪಾನ ಶಿಶುಗಳಿಗೆ ಅತೀ ಅಗತ್ಯವಾಗಿದೆ.ಭಾರತದ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನಿಸೆಫ್ ಸಂಸ್ಥೆಗಳು ಕೂಡಾ ಸ್ತನ್ಯಪಾನದ ಅಗತ್ಯತೆ ಮತ್ತು ಅನಿವಾರ್ಯತೆ ಬಗ್ಗೆ ಈ ಕೆಳಗಿನಂತೆ ಆದೇಶ ಹೊರಡಿಸಿದೆ.
1) ಮಗು ಜನಿಸಿದ ಒಂದು ಗಂಟೆಯೊಳಗೆ ಮೊಲೆ ಹಾಲನ್ನು ನೀಡತಕ್ಕದ್ದು.
2) ಮಗುವಿಗೆ ಆರು ತಿಂಗಳು ಆಗುವ ವರೆಗೆ ಸ್ತನ್ಯಪಾನ ಮಾಡಿಸಬೇಕು. ಎದೆಹಾಲು ಅಲ್ಲದೆ ಬೇರೆ ಯಾವುದೇ ಆಹಾರ ನೀಡಬಾರದು.
3) ಸ್ತನ್ಯಪಾನವನ್ನು ಎರಡು ವರ್ಷಗಳ ವರೆಗೆ ಮುಂದುವರಿಸಬಹುದು.
4) ಮಗುವಿಗೆ ಆರು ತಿಂಗಳು ಆದ ಬಳಿಕ ಸೂಕ್ತವಾದ ಪೂರಕ ಆಹಾರವನ್ನು ಆರಂಭಿಸಬಹುದು.

ಸ್ತನ್ಯಪಾನದ ಪ್ರಯೋಜನಗಳು

ತಾಯಿಯ ಎದೆಹಾಲಿನಲ್ಲಿರುವ ಪ್ರೋಟೀನ್ ಮಗುವಿನ ಮೆದುಳು ಬೆಳವಣಿಗೆಗೆ ಅತೀ ಅವಶ್ಯಕ ಮತ್ತು ಎದೆ ಹಾಲಿನಲ್ಲಿರುವ ಕೊಬ್ಬಿನ ಅಂಶವು ಮಗುವಿನ ನರಮಂಡಲ ವ್ಯವಸ್ಥೆ ಅಭಿವೃದ್ಧಿಯಾಗಲು ಪೂರಕ. ತಾಯಿಯ ಎದೆ ಹಾಲಿನಲ್ಲಿ ಇರುವ ಸೋಡಿಯಂ,ಜಿಂಕ್ ಹಾಗೂ ಇತರ ಲವಣಗಳು ಮಗುವಿನ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಟ ಗೊಳಿಸುತ್ತದೆ. ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ, ಅಲರ್ಜಿ, ಅಸ್ತಮಾ ,ಕಾಮಾಲೆ, ಹೃದ್ರೋಗ ಮತ್ತು ಜಠರ ರೋಗಗಳನ್ನು ತಡೆಗಟ್ಟಲು ತಾಯಿಯ ಎದೆ ಹಾಲು ಅತೀ ಅಗತ್ಯ. ಎದೆಹಾಲನ್ನು ಯಥೇಚ್ಛವಾಗಿ ಕುಡಿದ ಮಗುವಿನ ಬುದ್ಧಿಮಟ್ಟವು ಹೆಚ್ಚಾಗಿರುತ್ತದೆ ಎಂದೂ ಅಧ್ಯಯನಗಳಿಂದ ತಿಳಿದುಬಂದಿದೆ. ತಾಯಿಯ ಎದೆ ಹಾಲಿನಲ್ಲಿ ಹೇರಳವಾಗಿ ಕಿಣ್ವಗಳು, ಆಂಟಿ ಆಕ್ಸಿಡೆಂಟ್ ಗಳು ಹಾಗೂ ಆಂಟಿಬಾಡಿಗಳು ಇರುತ್ತದೆ ಮತ್ತು ಶಿಶುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ತಾಯಿಯ ಎದೆ ಹಾಲು ಕುಡಿದ ಮಕ್ಕಳಲ್ಲಿ ಮಲಬದ್ಧತೆ, ಅತಿಸಾರ, ಬೇಧಿ ಹಾಗೂ ಇತರ ಜಠರ ಸಂಬಂಧಿ ಕಾಯಿಲೆ ವಿರಳವಾಗಿರುತ್ತದೆ. ಅದೇ ರೀತಿ ಎದೆ ಹಾಲು ನೀಡುವ ತಾಯಂದಿರಿಗೆ ಅಸ್ಥಿ ರಂಧ್ರತೆ ಬರುವ ಸಾಧ್ಯತೆ ಕಡಿಮೆ ಮತ್ತು ಅಂಡಾಶಯದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.ಎಲ್ಲಕ್ಕಿಂತ ಮಿಗಿಲಾಗಿ ತಾಯಿ ಮತ್ತು ಮಗುವಿನ ಬಾಂಧವ್ಯ ವ್ರದ್ದಿಸುತ್ತದೆ.ತಾಯಿಯ ಅನಗತ್ಯ ಗರ್ಭಧಾರಣೆ ಯನ್ನು ತಡೆಯುತ್ತದೆ.ಸ್ತನದ ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ದೇಹದ ತೂಕ ನಿಯಂತ್ರಿಸಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಎಂಬ ಸಂಜೀವಿನಿ

ಮಗು ತಾಯಿಯ ಗರ್ಭದಿಂದ ಹೊರಬಂದ ಕೂಡಲೇ ತಾಯಿಯ ಸ್ತನಗಳಿಂದ ಒಂದೆರಡು ಘಂಟೆಗಳ ಕಾಲ ಹಳದಿ ಬಣ್ಣದ ಜೀವದ್ರವ್ಯ ಒಸರಲು ಆರಂಭವಾಗುತ್ತದೆ. ಎದೆ ಹಾಲು ಬರುವ ಮೊದಲೇ ಈ ಜೀವದ್ರವ್ಯ ಸಾಮಾನ್ಯವಾಗಿ ಎಲ್ಲಾ ಸಸ್ತನಿಗಳ ಸ್ತನಗಳಿಂದ ಒಸರುತ್ತದೆ. ಆಂಗ್ಲಭಾಷೆಯಲ್ಲಿ ಈ ದ್ರವವನ್ನು ಕೊಲೆಸ್ಟ್ರಮ್ ಎಂದು ಕರೆಯುತ್ತಾರೆ. ಇದೊಂದು ನಸು ಹಳದಿ ಬಣ್ಣದ ಅಂಟಾದ ಮಂದ ದ್ರವ್ಯವಾಗಿರುತ್ತದೆ.ಅಚ್ಚ ಕನ್ನಡ ದಲ್ಲಿ ಗಿಣ್ಣುಹಾಲು ಎಂದೂ ಕರೆಯುತ್ತಾರೆ.ಇದೊಂದು ಅತ್ಯಂತ ಅಮೂಲ್ಯವಾದ ಸಂಜೀವಿನಿ ಅಥವಾ ಜೀವದ್ರವ್ಯ ಎಂದರೂ ಅತಿಶಯೋಕ್ತಿಯಾಗಲಾರದು. ತಾಯಂದಿರು ಈ ಕೊಲೆಸ್ಟ್ರಮ್‍ ಅನ್ನು ಸಂಪೂರ್ಣವಾಗಿ ಮಗುವಿಗೆ ನೀಡಬೇಕು. ಒಂದು ಹನಿಯೂ ವ್ಯರ್ಥವಾಗದಂತೆ ಈ ಜೀವ ದ್ರವವನ್ನು ಮಗುವಿಗೆ ಸಿಗುವಂತೆ ಮಾಡುವ ಹೊಣೆಗಾರಿಕೆ ತಾಯಂದಿರು ಮತ್ತು ದಾದಿಯರಿಗೆ ಇರುತ್ತದೆ. ಈ ಕಾರಣದಿಂದಲೇ ತಾಯಂದಿರು ಮಗು ಹುಟ್ಟಿದ ಕೂಡಲೇ ಒಂದೆರಡು ಗಂಟೆಗಳ ಒಳಗೆ ಮಗುವಿಗೆ ಸ್ತನಪಾನ ಮಾಡಿಸಲೇಬೇಕು. ಈ ಕೊಲೆಸ್ಟ್ರಮ್‍ನಲ್ಲಿ ತಾಯಿಯಿಂದ ಮಗುವಿಗೆ ಪೋಷಕಾಂಶಗಳು, ರೋಗಗಳಿಂದ ರಕ್ಷಣೆ ನೀಡುವ ಅತ್ಯಮೂಲ್ಯ ಆಂಟಿಬಾಡಿಗಳು ಇರುತ್ತದೆ. ಈ ಆಂಟಿಬಾಡಿಗಳು ಮಗುವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಮಗುವಿನ ಜೀವ ರಕ್ಷಕ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆ ಸರಿಯಾಗಿ ಬೆಳವಣಿಗೆ ಆಗಿ, ತನ್ನಿಂತಾನೇ ತನ್ನದೇ ದೇಹದಲ್ಲಿ ಆಂಟಿಬಾಡಿಗಳು ಉತ್ಪಾದನೆಯಾಗುವವರೆಗೆ ತಾಯಿಯಿಂದ ಕೊಲೆಸ್ಟ್ರಮ್‍ನ ಜೊತೆಗೆ ಬಳುವಳಿಯಾಗಿ ಬಂದ ಆಂಟಿಬಾಡಿಗಳು ಮಗುವನ್ನು ಮಾರಣಾಂತಿಕ ರೋಗಗಳಿಂದ ರಕ್ಷಿಸುತ್ತದೆ. ಮಗುವಿನ ರಕ್ಷಣಾ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಿ ಯಾವುದೇ ಸೋಂಕು ಶಿಶುವಿಗೆ ಬಾರದಂತೆ ತಡೆಯುತ್ತದೆ. ಈ ಜೀವದ್ರವ್ಯ ಕೊಲೆಸ್ಟ್ರಮ್‍ನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ. ಈ ಪ್ರೋಟೀನ್ ಮಗುವಿನ ಆರಂಭಿಕ ಬೆಳವಣಿಗೆಗೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸುದೃಡಗೊಳಿಸಲು ಅತೀ ಅವಶ್ಯಕ.
ಶಿಶುಗಳಲ್ಲಿ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಚಿಕ್ಕದಾಗಿದ್ದು ಪ್ರಾಥಮಿಕ ಹಂತದಲ್ಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಅತೀ ಹೆಚ್ಚು ಸಾಮಥ್ರ್ಯದ ಪೋಷಕಾಂಶಯುಕ್ತ ಪ್ರೋಟೀನ್ ಮತ್ತು ಖನಿಜಾಂಶಗಳು, ಜೀವಧಾತುಗಳನ್ನು ಅತೀ ಕಡಮೆ ಗಾತ್ರದಲ್ಲಿ ನೀಡುತ್ತದೆ. ಈ ಕೊಲೆಸ್ಟ್ರಮ್ ಮಗುವಿಗೆ ಮೊದಲ ಮಲವಿರ್ಸಜನೆ ಮಾಡಲು ಪೂರಕವಾದ ವಾತಾವರಣ ನಿರ್ಮಿಸಿ ಕೊಡುತ್ತದೆ. ಶಿಶುಗಳ ಮೊದಲ ಮಲವನ್ನು ಮೆಕೋನಿಯಮ್ ಎನ್ನುತ್ತಾರೆ. ಇದರ ಮುಖಾಂತರ ದೇಹದಲ್ಲಿನ ಹೆಚ್ಚಿನ ಪ್ರಮಾಣದ ‘ಬಿಲುರುಬಿನ್’ ಎಂಬ ವಸ್ತು ದೇಹದಿಂದ ಹೊರಹಾಕಲ್ಪಡುತ್ತದೆ. ಮಗು ತಾಯಿಯ ಗರ್ಭದಿಂದ ಹೊರ ಬಂದಾಗ ರಕ್ತದ ಪ್ರಮಾಣ ತೀವ್ರವಾಗಿ ಕಡಮೆಯಾಗಿ, ಕೆಂಪು ರಕ್ತಕಣಗಳು ಸತ್ತು ಹೋಗಿ ಅತಿ ಹೆಚ್ಚು ಪ್ರಮಾಣದಲ್ಲಿ ಬಿಲುರುಬಿನ್ ದೇಹದಲ್ಲಿ ಶೇಖರಣೆಯಾದಲ್ಲಿ ಮಗುವಿಗೆ ಕಾಮಾಲೆ ರೋಗ ಅಥವಾ ಜಾಂಡೀಸ್ ಬರುತ್ತದೆ. ಒಟ್ಟಿನಲ್ಲಿ ಈ ‘ಬಿಲುರುಬಿನ್’ ವರ್ಣದ್ರವ್ಯ ಸರಾಗವಾಗಿ ದೇಹದಿಂದ ಹೊರ ಹೋಗಲು ಕೊಲೆಸ್ಟ್ರಮ್ ಸಹಾಯ ಮಾಡುತ್ತದೆ.
ಕೊಲೆಸ್ಟ್ರಮ್‍ನಲ್ಲಿ ದೇಹದ ರಕ್ಷಣ ವ್ಯವಸ್ಥೆಯ ಸೈನಿಕರಾದ ‘ಲಿಂಪೋಸೈಟ್’ ಎಂಬ ಬಿಳಿರಕ್ತಕಣಗಳು ಮತ್ತು ಅತೀ ಪ್ರಮುಖವಾದ ಆಂಟಿಬಾಡಿಗಳಾದ IgA, IgG ಮತ್ತು IgM ಇರುತ್ತದೆ. ಇದಲ್ಲದೆ ಲೈಜೋಜೈಮ್, ಲಾಕ್ಟೋಪೆರಾಕ್ಸಿಡೇಸ್, ಕಾಂಪ್ಲಿಮೆಂಟ್, ಪಾಲಿಪೆಪ್ಟೈಡ್, ಇಂಟರ್‍ಲ್ಯುಕಿನ್, ಸೈಟೋಕೈನ್ ಮುಂತಾದ ಅತೀ ಅವಶ್ಯಕ ಜೀವರಕ್ಷಕ ಧಾತುಗಳು ಇರುತ್ತದೆ.

ಕೊನೆಮಾತು :-

ಜಗತ್ತಿನಲ್ಲಿ ಜನ್ಮವೆತ್ತ ಪ್ರತಿ ಜೀವಸಂಕುಲಕ್ಕೂ, ಹುಟ್ಟಿದ ತಕ್ಷಣದಿಂದ ಆಹಾರ ಅತೀ ಅವಶ್ಯಕ. ನವಜಾತ ಶಿಶುವಿಗೆ ತಾಯಿಯ ಎದೆಹಾಲಿಗೆ ಸರಿ ಸಮಾನವಾದ ಆಹಾರ ಇನ್ನೊಂದಿಲ್ಲ. ಎದೆಹಾಲು ಎನ್ನುವುದು ಮಗುವಿಗೆಂದೇ ತಯಾರಾದ ನೈಸರ್ಗಿಕ ಆಹಾರ. ಅಥವಾ ಜೀವ ರಕ್ಷಕ ಜೀವದ್ರವ್ಯ. ಎದೆಹಾಲು ಕುಡಿಸುವುದರಿಂದ ತಾಯಿಗೆ ಮಾತೃತ್ವದ ಖುಷಿ ದೊರಕಿದರೆ ಮಗುವಿಗೆ ಆಹಾರದ ಜೊತೆಗೆ ಸುರಕ್ಷತೆಯ ಭಾವ ಮೂಡುತ್ತದೆ. ಸ್ತನಪಾನ ಕ್ರಿಯೆಯಲ್ಲಿ ತಾಯಿ ಮತ್ತು ಶಿಶುವಿಗೆ ಪರಸ್ಪರವಾಗಿ ಒಬ್ಬರಿಗೆ ಒಬ್ಬರ ಉಸಿರು, ವಾಸನೆ, ಹೃದಯ ಬಡಿತ ಸಮ್ಮಿಳಿತಗೊಂಡು ಅನ್ಯೋನತೆಯ ಎಳೆಗಳು ಬೆಸೆದುಕೊಳ್ಳುತ್ತದೆ. ಎದೆ ಹಾಲು ಉತ್ಪತ್ತಿಯಾಗುವ ಮೊದಲು ಒಸರುವ ಹಳದಿ ಬಣ್ಣದ ಜೀವದ್ರವ್ಯ, ಕೊಲೆಸ್ಟ್ರಮ್ ಕೋಟಿಕೋಟಿ ಕೊಟ್ಟರೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಮಗು ಹುಟ್ಟಿದ ಮೂರರಿಂದ ನಾಲ್ಕು ದಿನಗಳವರೆಗೆ ಕೊಲೆಸ್ಟ್ರಮ್ ಮಗುವಿಗೆ ಸಿಗುತ್ತದೆ. ಅ ಬಳಿಕ ಹೆಚ್ಚು ಎದೆ ಹಾಲು ಉತ್ಪತ್ತಿಯಾಗಿ ಕೊಲೆಸ್ಟ್ರಮ್ ಅಂಶ ಕಡಿಮೆಯಾಗುತ್ತದೆ. ಕೆಲವೊಮ್ಮೆ ನೀರು ನೀರಾಗಿ ಬಣ್ಣ ರಹಿತ ದ್ರವವಾಗಿ ಕಂಡು ಬಂದರೂ. ಕೊಲೆಸ್ಟ್ರಮ್‍ನಲ್ಲಿರುವ ಬೀಟಾಕೆರೊಟಿನ್ ಅಂಶದಿಂದಾಗಿ ಹೆಚ್ಚಾಗಿ ನಸು ಹಳದಿ ಬಣ್ಣ ಬರುತ್ತದೆ. ಪ್ರತಿಬಾರಿ ಸ್ತನ್ಯಪಾನ ಮಾಡಿದಾಗಲೂ ಮಗುವಿಗೆ ಅರ್ಧ ಟೀ ಸ್ಪೂನ್‍ನಷ್ಟು ಕೊಲೆಸ್ಟ್ರಾಮ್ ಮೊದಲ 24 ಗಂಟೆಗಳಲ್ಲಿ ದೊರಕುತ್ತದೆ. ಮಗುವಿನ ಸಣ್ಣ ಕರುಳಿನ ಗಾತ್ರ ಕೇವಲ 5ರಿಂದ 7ಮೀ.ಲೀ ಇರುವುದರಿಂದ ಪ್ರತಿಬಾರಿ ಸ್ತನಪಾನ ಮಾಡಿದಾಗ ಒಂದು ಟೀ ಸ್ಪೂನ್ ಕೊಲೆಸ್ಟ್ರಮ್ ಧಾರಾಳವಾಗಿ ಸಾಕಾಗುತ್ತದೆ. ಒಟ್ಟಿನಲ್ಲಿ ಕೋಟಿ ಕೋಟಿ ಕೊಟ್ಟರೂ ಸಿಗದ ಕೊಲೆಸ್ಟ್ರಮ್ ಶಿಶುಗಳ ಆರೋಗ್ಯವನ್ನು ಕಾಪಾಡುವ ಸಂಜೀವಿನಿ ಎಂದರೆ ಅತಿಶಯೊಕ್ತಿಯಲ್ಲ. ಪ್ರತೀ ತಾಯಂದಿರು ಈ ಕೊಲೆಸ್ಟ್ರಮ್ ಮಹತ್ವವನ್ನು ಅರಿತು ಮಗು ಹುಟ್ಟಿದ ಕೂಡಲೇ ಶಿಶುಗಳಿಗೆ ಸ್ತನ್ಯಪಾನ ಮಾಡಿಸಿದ್ದಲ್ಲಿ ಆರೋಗ್ಯವಂತ ಶಿಶುಗಳು ಮಕ್ಕಳಾಗಿ ಬೆಳೆದು ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯವಿದೆ ಅದರಲ್ಲಿಯೇ ಸಮಾಜದ ಹಿತ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು


MDS,DNB,MOSRCSEd(U.K), FPFA, M.B.A
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು . ಮೊ : 9845135787
drmuraleechoontharu@gmail.com

LEAVE A REPLY

Please enter your comment!
Please enter your name here