ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಯನ್ನು ವಾಟ್ಸಾಪ್ ಮೂಲಕ ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡಿ ಬಳಿಕ ಆಕೆಗೆ ಬೆದರಿಸಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಸಂಬಂಧ ಅಪರಾಧಿಗೆ 20 ವರ್ಷ ಕಠಿಣ ಸಜೆ ಮತ್ತು ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಫ್‌ಸಿ-2 (ಪೋಕ್ಲೋ) ಕೋರ್ಟ್ನಲ್ಲಿ ಆರೋಪ ಸಾಬೀತಾಗಿದ್ದು, ಅಪರಾಧಿ ಬಂಟ್ವಾಳ ಸಜಿಪನಡು ಬಸ್ತಿಗುಡ್ಡೆ ನಿವಾಸಿ ಮನ್ಸೂರ್ ಯಾನೆ ಮೊಹಮ್ಮದ್ ಮನ್ಸೂರ್ ಯಾನೆ ಜಾಬೀರ್ (33) ಎಂಬಾತನಿಗೆ 20 ವರ್ಷ ಕಠಿಣ ಸಜೆ ಮತ್ತು 55 ಸಾವಿರ ರೂ. ದಂಡ ವಿಧಿಸಿ ಮಾನು ಕೆ.ಎಸ್. ಅವರು ತೀರ್ಪು ನೀಡಿದ್ದಾರೆ.
ಆರೋಪಿ ಮನ್ಸೂರ್ 2023ರಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಕಾರು, ಬೈಕಿನಲ್ಲಿ ಸುತ್ತಾಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಬಳಿಕ ಮಂಗಳೂರಿನ ಮಹಿಳಾ ಠಾಣೆಗೆ ವರ್ಗಾವಣೆಯಾಗಿತ್ತು. ದಂಡದ ಮೊತ್ತ 55 ಸಾವಿರ ರೂ.ವನ್ನು ಸಂತ್ರಸ್ತ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಬೇಕು. ಜತೆಗೆ ಕಾನೂನು ಸೇವಾ ಪ್ರಾಧಿಕಾರದಿಂದಲೂ ನೊಂದ ಬಾಲಕಿಗೆ 3.45 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ನಿರ್ದೇಶನ ನೀಡಿದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.
Home Uncategorized ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ; ಬಂಟ್ವಾಳದ ಮೊಹಮ್ಮದ್ ಮನ್ಸೂರ್ ಗೆ 20 ವರ್ಷ ಕಠಿಣ ಸಜೆ