ಹೊಸಂಗಡಿ: ಹೊಂನೆಯ ಕಂಬಳಿ ಅರಸರ ವೀರಮಹಾಸತಿಯರ, ಅಪ್ರಕಟಿತ ಶಾಸನ ಪತ್ತೆ

0
55

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಕಾರೂರಿನ ಅಕ್ಷಯ್ ಶೆಟ್ಟಿ ಮತ್ತು ಆಶಾ ಶೆಟ್ಟಿ ದಂಪತಿಗಳವರ ಜಾಗದ ಗದ್ದೆಯ ದಿಬ್ಬದಲ್ಲಿ ಈ ಶಾಸನ ಪತ್ತೆಯಾಗಿದೆ. ನೂರಾರು ವರ್ಷಗಳಿಂದಲೂ ಊರಿನವರು ಯಕ್ಷಿಯ ಕಲ್ಲೆಂದು ಈ ಶಾಸನವನ್ನು ಪೂಜಿಸುತ್ತಿದ್ದಾರೆ. ಇತ್ತೀಚಿಗೆ ಜಾಗವನ್ನು ಖರೀದಿಸಿದ ದಂಪತಿಗಳು ವೀರಗಲ್ಲೆಂದು ಭಾವಿಸಿದ್ದರು. ಈ ಶಾಸನದ ಪ್ರತಿ ತೆಗೆಯುವಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ.

ತುಮಕೂರು ವಿ. ವಿ ಕುಲಸಚಿವರಾದ ಪ್ರೊ. ಎಂ ಕೊಟ್ರೇಶ್ ರವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿರುವ ಸಿದ್ದಾಪುರದ ವೈಶಾಲಿ ಜಿ. ಆರ್ ರವರ ಕ್ಷೇತ್ರಕಾರ್ಯದ ಸಂಶೋಧನೆಯಲ್ಲಿ ಎಡಮೊಗೆ ಮಹೇಶ್ ಭಟ್ ರವರ ಮಾಹಿತಿಯಿಂದ ಈ ಶಾಸನ ಬೆಳಕಿಗೆ ಬಂದಿದೆ.

ತುಮಕೂರು ವಿ. ವಿ ಸಂಶೋಧನಾರ್ಥಿ ಶಶಿಕುಮಾರ್ ನಾಯ್ಕ್ ಶಾಸನದ ಪಠ್ಯ ತಯಾರಿಸಿದ್ದು, ಹೆಚ್ಚಿನ ಸ್ಪಷ್ಟತೆಗಾಗಿ ASI ನಲ್ಲಿ ಶಾಸನತಜ್ಞರಾಗಿ ಕಾರ್ಯನಿರ್ವಹಿಸಿದ್ದ ಡಾ. ಹೆಚ್ ಎಂ ನಾಗರಾಜ್ ರಾವ್ ರವರನ್ನು ಕೋರಲಾಗಿ ಪುನರ್ ಪರಿಶೀಲಿಸಿದ ಶಾಸನ ಪಠ್ಯವನ್ನವರು ನೀಡಿದ್ದಾರೆ.

ಶಾಸನ ಶಿಲ್ಪ
ಗ್ರಾನೈಟ್ ಶಿಲೆಯಲ್ಲಿರುವ ಬರೆದಿರುವ ಈ ಶಿಲ್ಪವು ಸುಮಾರು 6 ಅಡಿಗಿಂತ ಹೆಚ್ಚು ಎತ್ತರವಿದ್ದು ಎರೆಡುಮುಕ್ಕಾಲು ಅಡಿಯಷ್ಟು ಅಗಲವಿದೆ. ಶಿಲ್ಪದ ಮೇಲ್ಭಾಗದಲ್ಲಿ ಕೀರ್ತಿಮುಖ, ಅದರ ಕೆಳಭಾಗದ ಇಕ್ಕೆಲಗಳಲ್ಲಿ ಸೂರ್ಯ,ಚಂದ್ರ ಮಧ್ಯಭಾಗದಲ್ಲಿ ಶಿವಲಿಂಗ ಹಾಗೂ ಬಲಎಡಭಾಗದಲ್ಲಿ ಕ್ರಮವಾಗಿ ನಂದಿ ಮತ್ತು ಶಿವಲಿಂಗವನ್ನು ಪೂಜಿಸುತ್ತಿರುವ ಭಕ್ತನ ಉಬ್ಬು ಶಿಲ್ಪಗಳಿವೆ. ಅದರ ಕೆಳಗಿನ ಮೊದಲನೆಯ ಪಟ್ಟಿಕೆಯಲ್ಲಿ 3 ಸಾಲುಗಳ ಶಾಸನವಿದೆ. ಮೊದಲನೆ ಪಟ್ಟಿಕೆಯ ಕೆಳಭಾಗದಲ್ಲಿ ಸುಂದರವಾದ ಮೂವರು ಸ್ತ್ರೀಯರೂ ಮುಡಿಯನ್ನು ಕಟ್ಟಿ, ರಾಣಿಯರಂತೆ ವಸ್ತ್ರಾಭರಣಗಳನ್ನು ತೊಟ್ಟು ಎಡಬಲಕೈಗಳಲ್ಲಿ ಕ್ರಮವಾಗಿ ಕನ್ನಡಿ ಮತ್ತು ನಿಂಬೆಹಣ್ಣನ್ನು ಹಿಡಿದಿದ್ದಾರೆ ಹಾಗೂ ಅವರ ಮಧ್ಯದಲ್ಲಿರುವ ವೀರ ರಾಜೋಚಿತ ವಸ್ತ್ರಾಭರಣ ತೊಟ್ಟು ಬಲಕೈಯಲ್ಲಿ ಖಡ್ಗ ಹಿಡಿದು ಎಡಕೈ ಮೇಲೆ ಉತ್ತರೀಯವನ್ನು ಹಾಕಿ ಕೈಯನ್ನು ಹೊಟ್ಟೆಯಭಾಗದಲ್ಲಿರಿಸಿ ನಿಂತಿರುವ ಉಬ್ಬುಶಿಲ್ಪಗಳ ಅದ್ಭುತ ಕೆತ್ತನೆಯನ್ನು ಶಿಲ್ಪಿಯು ಇಲ್ಲಿ ಮಾಡಿದ್ದಾನೆ. ಅದರ ಕೆಳಗಿನ ಎರಡನೇ ಪಟ್ಟಿಕೆಯಲ್ಲಿ 2 ಸಾಲುಗಳ ಶಾಸನವಿದೆ ಮತ್ತು ಆ ಪಟ್ಟಿಕೆಯ ಕೆಳಭಾಗದಲ್ಲಿ ರಾಜೋಚಿತ ವಸ್ತ್ರಾಭರಣ ತೊಟ್ಟು ಕುದುರೆ ಏರಿದ ವೀರನು ಬಲಗೈನಲ್ಲಿ ಈಟಿ, ಎಡಕೈನಲ್ಲಿ ಕುದುರೆಯ ಲಗಾಮನ್ನು ಹಿಡಿದಿದ್ದಾನೆ ಇಲ್ಲಿ ವೀರನ ತಲೆ ಹಾಗೂ ಮುಖ ಭಾಗದ ಕೆತ್ತನೆಯಲ್ಲಿ ಸ್ಪಷ್ಟತೆ ಕಾಣಿಸುವುದಿಲ್ಲ! ಅದರ ಕೆಳಭಾಗ ಮತ್ತೆರೆಡು ಸಾಲುಗಳ ಶಾಸನವಿದೆ. ಒಟ್ಟು 7 ಸಾಲುಗಳ ಶಾಸನವು ಈ ಶಿಲ್ಪದಲ್ಲಿದೆ.

ಶಾಸನ ಸಾರಾಂಶ
ಸ್ವಸ್ತಿ ಶ್ರೀ ಇಂದ ಪ್ರಾರಂಭವಾಗಿ, ಶಾಲಿವಾಹನ ಶಕ ವರುಷ ಜಯಾಭ್ಯುದಯ 1388 ಸಂದ ವ್ಯಯನಾಮ ಸಂವತ್ಸರದ ಶುದ್ಧ 15 ಗುರುವಾರವೆಂದಿದೆ.ಇದು ಸಾ. ಶಕ 1467 ಫೆಬ್ರವರಿ 19 ಗುರುವಾರಕ್ಕೆ ಸರಿ ಹೊಂದುತ್ತದೆ.ಶ್ರೀಮತು ಬಂಕಿಯರಸರೂ ಹೊಂನೆಯ ಕಂಬಳಿ ವೊಡೆಯರ ತಂಮ ದುಗ್ಗಯಣ/ದುಗ್ಗಣ್ಣ(ವೊಡೆಯರು) ಗುಂಮಟ ದೇವರ ಮಸ್ತಕಾಭಿಷೇಕಕ್ಕೆ ಹೋದಲ್ಲಿ, ಕುದುರೆ ವಯಹಾಳಿಯನೂ (ವೈಹಾಳಿ: ಕುದುರೆ ಸವಾರಿ/ ಕುದುರೆ ಸವಾರಿಯನ್ನು ಪ್ರದರ್ಶಿಸುವ ಸ್ಥಳ,-ಮೈದಾನ) ಮಾಡಲಾಗಿ ಕುದುರೆಯಿಂದ ಕೆಳಗೆ ಬಿದ್ದು ಸ್ವರ್ಗಸ್ತರಾದರು. ಇವರ ಕಯಿಧಾರೆಯ (ಸ್ತ್ರೀ) ವಂಶಿತಿ(ಸಾವಂಶಿತಿ) ಈ ಹೆಸರಿನ ಸ್ಪಷ್ಟತೆಗಾಗಿ ಪ್ರಯತ್ನಿಸಲಾಗುತ್ತಿದೆ. ಕಾಹಿನವರು( ರಕ್ಷಕರು/ಜೊತೆಯಲ್ಲಿದ್ದವರು) ರಾಮರಸಿ ಕಾಮರಸಿ ಆವರುಗಳು ಸಹಗಮ(ನ )ಸಂದಲ್ಲಿ ಪ್ರತಿಷ್ಠೆಯ ಮಾಡಿದ ಬೀರೆಯಕಲ್ಲು(ವೀರೆಯರ ) ಸುಭಮಸ್ತು ಎಂದು ಉಲ್ಲೇಖವಿದೆ.

ಈ ಶಾಸನೊಲ್ಲೇಖಿತ ಬಂಕಿಯರಸನು, ಸಾ. ಶಕ 1457 ರ ಜನ್ಸಾಲೆ ಶಾಸನದಲ್ಲಿ (ಡಾ. ಬಿ. ವಸಂತ ಶೆಟ್ಟಿಯವರ ಶೋಧ) ಉಲ್ಲೇಖಗೊಂಡ ತಿರುಮಲ ಸಾವಂತ ಬಂಕಿಯರಸ ಹೊoನೆಯ ಕಂಬಳಿ ವೊಡೆಯನಿರಬಹುದು. ಅವನ ಸಹೋದರ ದುಗ್ಗಯಣನಾಗಿದ್ದಿರಬೇಕು (ದುಗ್ಗಣ್ಣ) ಇಲ್ಲಿ ಗುಂಮಟ ದೇವರ ಮಸ್ತಕಾಭಿಷೇಕವೆಂದು ಹೇಳುವ ಸ್ಥಳ ಕಾರ್ಕಳದ್ದಾಗಿರಬಹುದೆಂದು ತೋರುತ್ತದೆ (ಕಾರ್ಕಳ ಗೊಮ್ಮಟನ ಸ್ಥಾಪನೆ: ಸಾ. ಶಕ 1432 ವೀರ ಪಾಂಡ್ಯ ಬೈರರಸ ಒಡೆಯ).ಹಂಪಿಯಲ್ಲಿ ಗಜ ವೈಹಾಳಿ ಶಿಲ್ಪಗಳಿದ್ದು (ಆನೆಗಳ ಹೋರಾಟದ ಪ್ರದರ್ಶನ) ಅದೇ ರೀತಿ ಮಸ್ತಕಾಭಿಷೇಕದಲ್ಲಿಯೇನಾದರೂ ಕುದುರೆ ವೈಹಾಳಿ ನೆಡೆಸಿದ್ದಿರಬಹುದೋ? ಎಂಬ ಊಹೆಗೆಡೆಮಾಡಿಕೊಡುತ್ತದೆ. ರಾಜವಂಶಕ್ಕೆ ಸೇರಿದ ಈ ಬಗೆಯ ವೀರಮಹಾಸತಿಯರ ಶಿಲ್ಪವು ಈ ಭಾಗದಲ್ಲಿ ಕಂಡುಬಂದಿರುವುದು ವಿರಳವೆಂದೇ ತೋರುತ್ತದೆ.

ಬಂಕಿಯರಸರು ಆರಗದಸೀಮೆಯೊಳಗಾದ ಮುಂಗಿನಾಡು ಕಬುನಾಡು ಹೊಸನಾಡು (ಸಂಪಗೆ ಕೋಟೆ ಶಾಸನ ಸಾ. ಶಕ 1522), ಬಿದನೂರು(ನಗರ)ಪಟ್ಟಗುಪ್ಪೆ ಘಟ್ಟದ ಕೆಳಗಿನ- ಕದಲಿ (ಇಂದಿನ ಕಡ್ರಿ), ಹೊಸಂಗಡಿ, ಹಟ್ಟಿಯಂಗಡಿ ಕೊಲ್ಲೂರು ಬಗ್ಗವಾಡಿ ಆರುನಾಡು ಮುಂತಾದವುಗಳನ್ನು ಆಳಿಕೊಂಡಿದ್ದರು. ಈವರೆಗೆ ದೊರೆತ ಶಾಸನಗಳಲ್ಲಿ ಸಾ. ಶಕ 1457 ರ ಜನ್ಸಾಲೆ ಶಾಸನವು ಕಂಬಳಿ ಅರಸರ ಮೊದಲನೆಯ ಶಾಸನ ಹಾಗೂ ವೀರ ಮಹಾಸತಿಯರ ಸಾ. ಶಕ 1467 ರ ಈ ಶಾಸನವು ಎರಡನೆಯದ್ದಾಗಿ ಕಾಣಿಸುತ್ತದೆ. ದೊರೆತಿರುವ ಆಧಾರಗಳ ಪ್ರಕಾರ ಹೊಂನೆಯ ಕಂಬಳಿ ಅರಸರು ಸುಮಾರು 13 ರಿಂದ 17 ನೇ ಶತಮಾನದವರೆಗೆ ಆಳ್ವಿಕೆ ಮಾಡಿದ್ದಿರಬಹುದು. ಈ ಅರಸರ ಕಾಲಘಟ್ಟದ ವೀರಗಲ್ಲು & ಮಾಸ್ತಿಗಲ್ಲುಗಳು ಕೆರೆಕಟ್ಟೆ ಮತ್ತು ಹೊಸಂಗಡಿಯ ಸಮೀಪದಲ್ಲಿ ಸುಮಾರು 7-8 ಕಂಡುಬಂದಿವೆ ಹಾಗೂ ಸುಮಾರು 25 ರಷ್ಟು ಶಾಸನಗಳಲ್ಲಿ ಕಂಬಳಿ ಅರಸರ ಉಲ್ಲೇಖಗಳಿವೆ. ಸಾ. ಶ. 1457 & ಸಾ. ಶಕ 1541 ರ ಶಾಸನಗಳಲ್ಲಿ, ಕ್ರಮವಾಗಿ ಇವರು ಕದಲಿಯಾಧಿಪತಿ( ಇಂದಿನ ಕಡ್ರಿ )ಮತ್ತು ಕಡರೆಯ ಸಿಂಹಾಸನಾಧೀಶ್ವರ ಬಂಕಿಯರಸರೂ ಎಂಬ ಉಲ್ಲೇಖಗಳಿವೆ.

ಈ ಕಾರ್ಯದಲ್ಲಿ, ಎಡಮೊಗೆ ಮಹೇಶ್ ಭಟ್, ಅಕ್ಷಯ ಶೆಟ್ಟಿ, ಪ್ರೀತಿ ಶೆಟ್ಟಿ, ಡಿ. ನಾಗೇಂದ್ರ ಯಡಿಯಾಳ, ಕೌಶಿಕ್ ಯಡಿಯಾಳ, ಡಾ. ಧ್ರುವ ಯಡಿಯಾಳ, ಅರುಣ ಕುಮಾರ್, ASI ನ ಡಾ. ಶ್ರೀದೇವಿ ತೇಜಸ್ವಿನಿ ಮತ್ತು ಕೋಟಾ ಪ್ರಭಾಕರ ಕಾರಂತರು ಸಹಕಾರ ನೀಡಿದ್ದಾರೆ.

LEAVE A REPLY

Please enter your comment!
Please enter your name here