ನಾನು ಭರತನಾಟ್ಯ ಮೂಲಕ ವಿಶ್ವ ದಾಖಲೆ ಮಾಡುವ ನನ್ನ ಸಾಧನೆಯ ಹಿಂದೆ ನನ್ನ ತಾಯಿಯು ಪ್ರೇರಣಾ ಶಕ್ತಿಯಾಗಿ ಪ್ರೋತ್ಸಾಹ ನೀಡಿದರು ಎಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾಡ್ಸ್ ವಿಶ್ವದಾಖಲೆಯ ಸಾಧಕಿ ರೆಮೋನಾ ಎವೆಟ್ ಪಿರೇರಾ ಅವರು ಹೇಳಿದರು.
ಅವರು ತುಳುಭವನದಲ್ಲಿ ಭಾನುವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆ ಜಂಟಿಯಾಗಿ ಆಯೋಜಿಸಿದ “ಮರಿಯಲದ ತುಳುನಾಡ್ “ ವಿಷಯದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ತಾಯಿಯ ಪ್ರೇರಣೆಯೊಂದಿಗೆ ಭಗವಂತನ ಕೃಪೆ ಹಾಗೂ ಕಾಲೇಜಿನವರ ಸಹಕಾರ, ವಿದ್ಯಾರ್ಥಿ ಮಿತ್ರರ ಬೆಂಬಲದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಈ ಸಾಧನೆಯ ಹಿಂದೆ ನನ್ನ ತುಂಬಾ ಪರಿಶ್ರಮವಿದೆ, ನಿರಂತರ 7 ದಿನಗಳ ಕಾಲ ನೃತ್ಯ ಮಾಡುವಾಗ ಅಂತಿಮ ಘಟ್ಟದಲ್ಲಿ ಸುಸ್ತಾಗಿರುವಂತೆ ಅನಿಸಿದರೂ ತಾಯಿಯ ಪ್ರೇರಣೆ ಹಾಗೂ ಭಗವಂತನ ಆರ್ಶೀವಾದದಿಂದ ಯಶಸ್ವಿಯಾಗಿ ವಿಶ್ವ ದಾಖಲೆಯನ್ನು ಪೂರೈಸಲು ಸಾಧ್ಯವಾಯಿತು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣಶ್ರೀ ರಾಜ್ಯ ಪ್ರಶಸ್ತಿ ವಿಜೇತೆ ಶ್ರೀಮತಿ ವೀಣಾ ಶ್ರೀನಿವಾಸ ಹಾಗೂ ಮಿಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ ಪಡೆದ ಮೈತ್ರಿ ಮಲ್ಲಿ ಅವರು ರೆಮೋನಾ ಎವೆಟ್ ಪಿರೇರಾ ಅವರನ್ನು ಸನ್ಮಾನಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್ ನ ಸದಸ್ಯೆ ಶ್ರೀಮತಿ ಅತ್ರಾಡಿ ಅಮೃತ ಶೆಟ್ಟಿ, ಜಿಲ್ಲಾ ವಾರ್ತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎ. ಖಾದರ್ ಷಾ, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ಪ್ರದೀಪ್ ಕಾಪಿಕಾಡ್, ಮಹಿಳಾ ವೇದಿಕೆಯ ಪದಾಧಿಕಾರಿ ಶೋಭಾ, ಸುಪ್ರೀತಾ, ಅತಿಥಿಗಳಾದ ಶಕುಂತಲಾ ಎಸ್, ವಸಂತಿ ಜಯಪ್ರಕಾಶ್, ಪವಿತ್ರಾ ಕೆ, ಚೇತನಾ ರೋಹಿತ್ ಉಳ್ಳಾಲ್, ಮಲ್ಲಿಕಾ ರಘುರಾಜ್, ಕವಿತಾ ಶೈಲೇಶ್, ಪ್ರತಾಪ್, ಕಿರಣ್ , ರಘುರಾಜ್ ಕದ್ರಿ, ರೆಮೋನಾ ಎವೆಟ್ ಪಿರೇರಾ ಅವರ ತಾಯಿ ಗ್ಲಾಡಿಸ್ ಪಿರೇರಾ , ಹರೀಶ್ ಕೊಡಿಯಾಲ್ ಬೈಲ್, ವಿಜಯ ಮಲ್ಲಿ ಮೊದಲಾದವರು ಉಪಸ್ಥಿತರಿದ್ದರು.