ಆಂಧ್ರಪ್ರದೇಶ: ಮದುವೆಯಾಗಿ ಕೇವಲ ಆರು ತಿಂಗಳು ಕಳೆದಿತ್ತಷ್ಟೇ, ಶ್ರೀವಿದ್ಯಾ ಇನ್ನಿಲ್ಲ ಎಂಬ ಸುದ್ದಿ ಕೇಳಿ ಕುಟುಂಬದವರಿಗೆ ಸಿಡಿಲು ಬಡಿದಂತಾಗಿತ್ತು. ಆಕೆ ತಮ್ಮನಿಗೆ ಬರೆದ ಪತ್ರ ಕರುಳು ಹಿಂಡುವಂತಿತ್ತು. ಈ ಸಲ ನನಗೆ ರಾಖಿ ಕಟ್ಟೋಕೆ ಆಗಲ್ಲ, ಕ್ಷಮಿಸಿಬಿಡು ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ. 24 ವರ್ಷದ ಶ್ರೀವಿದ್ಯಾ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಕಾಲೇಜು ಉಪನ್ಯಾಸಕಿಯಾಗಿದ್ದರು. ಆರು ತಿಂಗಳ ಹಿಂದಷ್ಟೇ ರಾಂಬಾಬು ಎಂಬುವವರನ್ನು ಮದುವೆಯಾಗಿದ್ದರು.
ಮದುವೆಯಾಗಿ ತಿಂಗಳಿನಿಂದಲೇ ಗಂಡನ ಮನೆಯವರಿಂದ ಕಿರುಕುಳ ಶುರುವಾಗಿತ್ತು ಎಂದು ಶ್ರೀವಿದ್ಯಾ ಪತ್ರದಲ್ಲಿ ಬರೆದಿದ್ದಾರೆ. ರಾಂಬಾಬು ಕುಡಿದು ಮನೆಗೆ ಬರುತ್ತಿದ್ದ. ದೈಹಿಕ ಹಿಂಸೆ ನೀಡುತ್ತಿದ್ದ, ಮಾತಿನಲ್ಲಿ ನಿಂದಿಸುತ್ತಿದ್ದ. ತನ್ನನ್ನು ಅಪಹಾಸ್ಯ ಮಾಡುತ್ತಿದ್ದ. ಬೇರೆ ಮಹಿಳೆಯರ ಮುಂದೆ ತನ್ನನ್ನು ನಿಷ್ಪ್ರಯೋಜಕ ಎಂದು ಕರೆಯುತ್ತಿದ್ದ ಎಂದು ಆಕೆ ಬರೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.