ಬಂಟ್ವಾಳ : ಇಲ್ಲಿನ ಬಂಟ್ವಾಳ-ಮೂಡುಬಿದ್ರೆ ಮುಖ್ಯ ರಸ್ತೆಯ ಬೈಪಾಸ್ ಎಂಬಲ್ಲಿ ರಸ್ತೆ ನಡುವೆ ಬೃಹತ್ ಗಾತ್ರದ ಹೊಂಡ ಕಾಣಿಸಿಕೊಂಡು ಮೂರು ತಿಂಗಳಿನಿಂದ ವಾಹನ ಸವಾರರು ಪಡುವ ಸಂಕಷ್ಟ ಮನಗಂಡು ರೋಟರಿ ಕ್ಲಬ್ ಸದಸ್ಯರೊಬ್ಬರು ರಸ್ತೆ ದುರಸ್ತಿಗೊಳಿಸಿ ಗಮನ ಸೆಳೆದಿದ್ದಾರೆ.
ಇಲ್ಲಿನ ತುಂಬೆ ಬೈಪಾಸ್ ಎಂಬಲ್ಲಿ ಕಳೆದ 50ಕ್ಕೂ ಮಿಕ್ಕಿ ವರ್ಷಗಳಿಂದ ಶ್ರೀರಾಮ್ ಟ್ರೇಡಸ್ರ್ ಹೆಸರಿನಲ್ಲಿ ಜೀನಸು ಅಂಗಡಿ ವ್ಯವಹಾರ ನಡೆಸುತ್ತಿರುವ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಸದಸ್ಯ ಹರೀಶ ಶೆಟ್ಟಿ ಇವರು ಗುತ್ತಿಗೆ ಸಂಸ್ಥೆಯೊಂದಕ್ಕೆ ಸ್ವತಃ ಹಣ ಪಾವತಿಸಿ ರಸ್ತೆಗೆ ಸಿಮೆಂಟ್ ಮಿಶ್ರಿತ ಜೆಲ್ಲಿ ಹಾಸುವ ಮೂಲಕ ಸಾಲು ಸಾಲು ಹೊಂಡಗಳಿಗೆ ಮುಕ್ತಿ ನೀಡಿದ್ದಾರೆ. ಈ ಬಾರಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಬಂಟ್ವಾಳ_ಮೂಡುಬಿದಿರೆ ರಸ್ತೆಯುದ್ದಕ್ಕೂ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ತುಂಬೆ ಬೈಪಾಸ್ ಎಂಬಲ್ಲಿ ಬೃಹತ್ ಗಾತ್ರದ ಹೊಂಡ ಕಾಣಿಸಿಕೊಂಡ ಪರಿಣಾಮ ಹಲವಾರು ದ್ವಿಚಕ್ರ ಮತ್ತು ರಿಕ್ಷಾ ಹಾಗೂ ಕಾರು ಮತ್ತಿತರ ಲಘು ವಾಹನಗಳು ಹೊಂಡಕ್ಕೆ ಬಿದ್ದು ಅಪಘಾತಗಳಿಗೆ ಕಾರಣವಾಗಿತ್ತು. ಇದನ್ನು ಮನಗಂಡ ಹರೀಶ ಶೆಟ್ಟಿ ಅವರು ರಸ್ತೆ ದುರಸ್ತಿಗೊಳಿಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿರುವುದಾಗಿ ತಿಳಿಸಿದ್ದಾರೆ.