ಬಂಟ್ವಾಳ: ಈಚೆಗಷ್ಟೆ ರೂ 3.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಲೋಕಾರ್ಪಣೆಗೊಳಿಸಿದ ಕಾವಳಪಡೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು 349.18 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ, ರೂ 1.63 ಕೋಟಿ ಮೊತ್ತದ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ 25ರಷ್ಟು ಲಾಭಾಂಶ ವಿತರಿಸುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಕೆ.ಪ್ರಮೋದ್ ಕುಮಾರ್ ರೈ ಹೇಳಿದ್ದಾರೆ.
ಇಲ್ಲಿನ ವಗ್ಗದಲ್ಲಿ ಕಾವಳಪಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಸೋಮವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನತೆಗೆ ರಿಯಾಯಿತಿ ದರದಲ್ಲಿ ಸಭಾಂಗಣ, ಸದಸ್ಯರ ಮಕ್ಕಳಿಗೆ ಶೇ.85ಕ್ಕೂ ಮಿಕ್ಕಿ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ಮತ್ತು ಸದಸ್ಯರು ಹೂಡಿಕೆ ಮಾಡುವ ಹಣಕ್ಕೆ ಶೇ 5 ರಷ್ಟು ಹೆಚ್ಚುವರಿ ಬಡ್ಡಿ ನೀಡುವುದಾಗಿ ಅವರು ವಿವರಿಸಿದರು.
ಸಂಘದ ಉಪಾಧ್ಯಕ್ಷ ಮ್ಮು ರೈ ಹರ್ಕಾಡಿ, ನಿರ್ದೇಶಕರಾದ ಪಿ.ಜಿನರಾಜ ಅರಿಗ, ಕೆ.ಚಂದಪ್ಪ ಪೂಜಾರಿ, ಬೆನಡಿಕ್ಟ್ ಡಿಸೋಜ, ಶಿವಪ್ರಸಾದ್, ಸವಿತ ಬಿ.ಎಸ್., ಆಶಾ, ಪ್ರಕಾಶ ಶೆಟ್ಟಿ, ನವೀನ್ ಶೆಟ್ಟಿ, ಚಂದಪ್ಪ ಮೂಲ್ಯ, ಬಾಲಕೃಷ್ಣ ನಾಯ್ಕ್, ರಾಜು, ಗಂಗಾಧರ ಪೂಜಾರಿ ಮತ್ತಿತರರು ಇದ್ದರು.
ಇದೇ ವೇಳೆ ಸಂಘದ ಸಿಇಒ ಶಿವಾನಂದ ಗಟ್ಟಿ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿ ಬಳಿಕ ವಂದಿಸಿದರು.

