ಮೂಡುಬಿದಿರೆ: ಇರುವೈಲು ಹೊಸಮಾರಪದವು ನಿವಾಸಿ ಸಂಜೀವ ಇವರು ಏಕಾಂಗಿಯಾಗಿ ಅನಾಥರಾಗಿದ್ದರು.ಅವರ ಅಸಹಾಯಕತೆ, ಏಕಾಂಗಿ ಬದುಕನ್ನು ಕಂಡ ಇರುವೈಲ್ ಫ್ರೆಂಡ್ಸ್ ಕ್ಲಬ್ ನವರು ಅಶ್ರಮಕ್ಕೆ ಸೇರಿಸಿದ್ದರು. ಕೆಲಕಾಲ ಆಶ್ರಮದಲ್ಲಿದ್ದ ಸಂಜೀವ ಅವರು ಸೋಮವಾರ ಆಶ್ರಮದಲ್ಲೇ ಅಸುನೀಗಿದ್ದರು. ಅಂತ್ಯಕ್ರಿಯೆ ನೆರವೇರಿಸಲು ಯಾರೂ ಇಲ್ಲದಾಗ ಇದೇ ಫ್ರೆಂಡ್ಸ್ ಕ್ಲಬ್ ನವರು ಮುಂದೆ ಹೋಗಿ ಶವವನ್ನು ಇರುವೈಲಿಗೆ ತಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಸಂಜೀವ ಅವರಿಗೆ ಹೆಂಡ್ತಿ ಮಕ್ಕಳು, ಸಂಸಾರ ಯಾರೂ ಇಲ್ಲ. ಇದ್ದರೂ ಎಲ್ಲಿದ್ದಾರೋ ಗೊತ್ತಿಲ್ಲ. ತಾಯಿ ಮಗ ಮಾತ್ರ ಇದ್ದವರು. ತಾಯಿ ವಯೋಸಹಜವಾಗಿ ಕಳೆದ ವರ್ಷ ಮೃತಪಟ್ಟಿದ್ದರು. ಸಂಜೀವ ಅವರ ನೇತ್ರವನ್ನು ದಾನ ಮಾಡಿಸುವ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದಾರೆ. ಸಂಜೀವ ಅವರ ತಾಯಿ ತೀರಿಕೊಂಡಾಗಲೂ ಅವರ ಅಂತ್ಯಕ್ರಿಯೆಯನ್ನು ಇದೇ ಫ್ರೆಂಡ್ಸ್ ಕ್ಲಬ್ ಬಳಗದವರು ನೆರವೇರಿಸಿದ್ದರು. ಅನಾಥನ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸೇವೆ ಮಾಡಿದ ಇರುವೈಲ್ ಫ್ರೆಂಡ್ಸ್ ಕ್ಲಬ್ ನ ಈ ಕಾರ್ಯ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಹೊಸಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಪೂಜಾರಿ ಕಾಳೂರು, ಪ್ರವೀಣ್ ಪೂಜಾರಿ, ಭರತ್ ಶೆಟ್ಟಿ, ಪ್ರದೀಪ್ ಶೆಟ್ಟಿ, ದಿನೇಶ್ ಪ್ರಭು ಪಂಜ, ದಯಾನಂದ ಪೂಜಾರಿ, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.

