ಕಲ್ಲಬೆಟ್ಟು : ಸಂಸ್ಕೃತ ಭಾಷೆಯು ಸಮುದ್ರದ ಆಳದಿಂದ ಹುಟ್ಟುವ ಮುತ್ತಿನಂತೆ. ಮುತ್ತನ್ನು ಪಡೆಯಲು ಚಿಪ್ಪನ್ನು ಒಡೆದು ನೋಡುವ ಅಗತ್ಯವಿದ್ದಂತೆ ಸಂಸ್ಕೃತವನ್ನು ಅರಿಯಲು ಅದರ ಪಾಠ ಪುಸ್ತಕದ ಚಿಪ್ಪುಗಳನ್ನು ಮೀರಿ ಒಳನೋಟ ಬೀರಿದರೆ ಅದರ ನಿಜವಾದ ಮೌಲ್ಯವು ನಮ್ಮ ಜೀವನವನ್ನು ಅಂದಗೊಳಿಸುತ್ತದೆ ಎಂದು ಪುತ್ತೂರು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಶ ಕುಮಾರ ಅಭಿಪ್ರಾಯಪಟ್ಟರು.
ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣಸಂಸ್ಥೆಯಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರಶ್ಮಿತಾ ಜೈನ್ ಮಾತನಾಡಿ, ನವಚೇತನದ ಭಾಷೆಯಾದ ಸಂಸ್ಕೃತವು ವಿಶ್ವಭಾಷೆಯಾಗಿ, ಸಂಸ್ಕಾರದ ಬಿಂಬವಾಗಿ ಭಾರತವನ್ನು ಪ್ರತಿನಿಧಿಸುತ್ತಿದೆ. ಭಾರತದ ಪ್ರಾಚೀನ ಸಾಹಿತ್ಯ-ಜ್ಞಾನಪರಂಪರೆಯ ಶ್ರೀಮಂತಿಕೆಗೆ ಅನ್ಯದೇ ಶೀಯರೂ ಒಲವನ್ನು ತೋರುತ್ತಿರುವುದು ಇದಕ್ಕೆ ನಿದರ್ಶನ ಎಂದು ಸಂಸ್ಕೃತ ಮಹತ್ತಿಕೆಯನ್ನು ಕೊಂಡಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭರತನಾಟ್ಯ ಮತ್ತು ಸಂಸ್ಕೃತ ಗೀತಗಾಯನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಸಂಸ್ಕೃತ ಉಪನ್ಯಾಸಕ ತೇಜಸ್ವೀ ಭಟ್ ಸ್ವಾಗತಿಸಿ, ಕು. ಗಗನ್ ಅತಿಥಿಗಳನ್ನು ಪರಿಚಯಿಸಿದರು. ಕು. ಹಿಮಾನಿ ಶೆಟ್ಟಿ ನಿರೂಪಿಸಿ, ಸಂಸ್ಕೃತ ಶಿಕ್ಷಕ ಪಾರ್ಶ್ವನಾಥ ಜೈನ್ ವಂದಿಸಿದರು.