ಸ್ಕೌಟ್ಸ್​ ಚಟುವಟಿಕೆಗಳಲ್ಲಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಸೇರ್ಪಡೆಗೊಳಿಸಲು ಚಿಂತನೆ: ಪಿ.ಜಿ.ಆರ್​. ಸಿಂಧ್ಯಾ

0
25

ರೋವರಿಂಗ್​ ಮತ್ತು ರೇಂಜರಿಂಗ್​ ಪ್ರಾರಂಭಿಕ ಶಿಬಿರ ಉದ್ಘಾಟನೆ

ಉಡುಪಿ: ಸ್ಕೌಟ್ಸ್​ ಚಟುವಟಿಕೆಗಳಲ್ಲಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಸೇರ್ಪಡೆಗೊಳಿಸವ ಚಿಂತನೆ ಇದೆ. ಇದರಿಂದ ಮಕ್ಕಳ ಜ್ಞಾಪನಾ ಸಾಮರ್ಥ್ಯವೂ ವೃದ್ಧಿಸಲಿದೆ ಎಂದು ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್​. ಸಿಂಧ್ಯಾ ಹೇಳಿದರು.
ಬೋರ್ಡ್​ ಹೈಸ್ಕೂಲಿನಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಭಾರತ್​ ಸೌಟ್ಸ್​ ಮತ್ತು ಗೈಡ್ಸ್​ ಸಂಯುಕ್ತಾಶ್ರಯದಲ್ಲಿ ಉಡುಪಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ, ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕ ಮತ್ತು ಉಪನ್ಯಾಸಕಿಯರಿಗೆ ರೋವರಿಂಗ್​ ಮತ್ತು ರೇಂಜರಿಂಗ್​ ಪ್ರಾರಂಭಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೋವರ್ಸ್​ ಮತ್ತು ರೇಂಜರ್ಸ್​ಗಳಿಗೆ ಶಿಸ್ತು ಮತ್ತು ಸಮಯಪ್ರಜ್ಞೆ ಬಹಳ ಮುಖ್ಯ. ಇಲ್ಲದಿದ್ದರೆ ದೇಶದ ಪ್ರಗತಿ ಸಾಧ್ಯವಿಲ್ಲ. ಕಮ್ಯುನಿಷ್ಟ್​ ರಾಷ್ಟ್ರಗಳಲ್ಲಿ ಜನರು ಶಿಸ್ತು ಮತ್ತು ಸಮಯಪ್ರಜ್ಞೆ ಅಳವಡಿಸಿಕೊಂಡಿದ್ದರಿಂದ ಆರ್ಥಿಕವಾಗಿ ಪ್ರಬಲರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಮಹಾನ್​ ಮುತ್ಸದ್ದಿ ಡಾ. ವಿ.ಎಸ್​. ಆಚಾರ್ಯ ಅವರು ಭಾರತ್​ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ಸಂಸ್ಥೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಎಲ್ಲಾ ಕಾಲೇಜುಗಳಲ್ಲಿ ಭಾರತ್​ ಸೌಟ್ಸ್​ ಮತ್ತು ಗೈಡ್ಸ್​ ಕಡ್ಡಾಯಗೊಳಿಸಿದ್ದರು ಎಂದು ಶ್ಲಾಘಿಸಿದರು.
ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಖಜಾಂಚಿ ಹರಿಪ್ರಸಾದ್​ ರೈ, ರಾಜ್ಯ ಸಂಟನಾ ಆಯುಕ್ತ ಎಂ. ಪ್ರಭಾಕರ ಭಟ್​, ಡಿಡಿಪಿಯು ಮಾರುತಿ, ಪಪೂ ಪ್ರಾಂಶುಪಾಲರ ಸಂದ ಜಿಲ್ಲಾಧ್ಯಕ್ಷ ವರ್ಗೀಸ್​ ಪಿ., ಜಿಲ್ಲಾ ಸ್ಕೌಟ್ಸ್​ ಆಯುಕ್ತ ಜನಾರ್ದನ ಕೊಡವೂರು, ಗೈಡ್ಸ್​ ಆಯುಕ್ತೆ ಜ್ಯೋತಿ ಪೈ, ಶಿಬಿರ ನಾಯಕ ಗುರುಮೂರ್ತಿ, ಜಿಲ್ಲಾ ಕಾರ್ಯದರ್ಶಿ ಆನಂದ್​ ಅಡಿಗ, ಕಾಲೇಜು ಪ್ರಾಂಶುಪಾಲೆ ಲೀಲಾವತಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here