ಕಾಸರಗೋಡು: ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಓರ್ವ ಮಹಾನ್ ವ್ಯಕ್ತಿ, ಅದ್ಭುತ ಪ್ರತಿಭೆ, ಕಾವ್ಯ ಮತ್ತು ಸಂಶೋಧನೆಯನ್ನು ಸವ್ಯಸಾಚಿಸಿದವರು. ಅವರ ಹೆಸರಿನಲ್ಲಿ ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಸ್ಥಾಪಿಸಿದ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವುದು ಬದುಕಿನ ಮಹಾ ಭಾಗ್ಯ ಎಂದು ಚಲನ ಚಿತ್ರ ಸಾಹಿತಿ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಹೇಳಿದರು. ಕನ್ನಡ ಭವನದ ರಜತ ವರ್ಷಾಚರಣೆ ಪ್ರಯುಕ್ತ ಕನ್ನಡ ಭವನ ವೇದಿಕೆಯಲ್ಲಿ ನಡೆದ ಗಣೇಶ ಚತುರ್ಥಿ ವಿಶೇಷ ಕಾರ್ಯಕ್ರಮದಲ್ಲಿ “ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2025.”ಸ್ವೀಕರಿಸಿ ಅವರು ಮಾತನಾಡಿದರು.
ರಾಷ್ಟ್ರಕವಿಗಳ ಜೀವನ ಸಾಧನೆಯ ಕುರಿತು ಚಲನ ಚಿತ್ರವೊಂದು ನಿರ್ಮಾಣವಾಗಲಿದ್ದು ಅದರ ಸಿದ್ಧತೆಯ ನಡುವೆ ಮಹಾಕವಿಗಳ ಹೆಸರಿನ ಪ್ರಶಸ್ತಿಯನ್ನು ಸಂತೋಷದಿಂದ ಹಾಗೂ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ ಎಂದು ಗಣೇಶ್ ಕಾಸರಗೋಡು ಹೇಳಿದರು. ಕ. ಸಾ. ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ನಿರ್ದೇಶಕ ಡಾ. ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಶಸ್ತಿ ಪ್ರದಾನ ಬಳಿಕ ಗಣೇಶ್ ಕಾಸರಗೋಡು ದಂಪತಿಗಳನ್ನು ಗೌರವಿಸಲಾಯಿತು. ಕನ್ನಡ ಭವನ ಮತ್ತು ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರಾದ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಉದ್ಘಾಟಿಸಿದರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ಕೆ ಉಳಿಯತಡ್ಕ ಅಭಿನಂದನಾ ಭಾಷಣ ಮಾಡಿದರು.ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಯ್ಕಪು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪತ್ರಕರ್ತ ಜಗನ್ನಾಥ್ ಶೆಟ್ಟಿ, ಜನಪ್ರಿಯೆ ವೈದ್ಯೆ ಡಾ ಸುಜಯಾ ಪಾಂಡ್ಯ, ಶುಭ ಹಾರೈಸಿದರು. ಕನ್ನಡ ಭವನದ ನಿರ್ದೇಶಕ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು
ಜಾನಪದ ಕಲಾವಿದೆ ಸುಭಾಷಿನಿ ಚಂದ್ರ ಕಣ್ಣೆಟಿಪಾರೆ ತಂಡದಿಂದ ಜಾನಪದ ನ್ರಿತ್ಯ, ಭಕ್ತಿ ಭಾವಗೀತೆ, ಪಾಡ್ದನ ಗಾಯನ ಜರಗಿತು. ಸುಭಾಷಿನಿ ಜತೆ ಸರಸ್ವತಿ, ಪ್ರೇಮ, ಸೌಮ್ಯ ಕೆ. ಏನ್, ಸನ್ವಿತ ಬಿ.,ಸೌಮ್ಯ ಬಿ ಎಸ್, ಸುಕನ್ಯ ಬಿ. ಎಸ್,ಪಾಲ್ಗೊಂಡಿದ್ದರು. ಎಲ್ಲಾ ಕಲಾವಿದರೀಗೆ ಸ್ಮರಣಿಕೆ, ಪ್ರಮಾಣ ಪತ್ರ, ನೀಡಿ ಅಭಿನಂದಿಸಲಾಯಿತು. ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ ಸ್ವಾಗತಿಸಿ, ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು. ಗಣೇಶ್ ಹಬ್ಬದ ವಿಶೇಷ ಉಪಚಾರ ಸಂದ್ಯಾ ರಾಣಿ ಟೀಚರ್ ನಿರ್ವಹಿಸಿದರು.