ಸೌಹಾರ್ದತೆಯೇ ಭಾರತದ ಶಕ್ತಿ: ಯು.ಟಿ. ಖಾದರ್

0
18

ಬಂಟ್ಸ್ ಹಾಸ್ಟೇಲ್ ನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಗಳೂರು: ಎಲ್ಲ ಜಾತಿ-ಧರ್ಮಗಳ ನಡುವೆ ಇರುವ ಪರಸ್ಪರ ಸೌಹಾರ್ದತೆಯೇ ಭಾರತ ದೇಶದ ದೊಡ್ಡ ಶಕ್ತಿಯಾಗಿದೆ. ಇಲ್ಲಿನ ಸಂಸ್ಕೃತಿ- ಸಂಸ್ಕಾರವನ್ನು ಯುವ ಜನಾಂಗಕ್ಕೆ ವರ್ಗಾಯಿಸಲು ಗಣೇಶೋತ್ಸವದಂತಹ ಹಬ್ಬಗಳು ಪೂರಕವಾಗಿವೆ ಎಂದು ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಹೇಳಿದರು.
ಅವರು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುತ್ತಿರುವ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೊದಲ ದಿನದ ಧಾರ್ಮಿಕ ಸಭೆಯ ಮುಖ್ಯ ಅತಿಥಿಯಾಗಿದ್ದರು.
ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ಸಮಾಜಕ್ಕೆ, ದೇಶಕ್ಕೆ ಪೂರಕವಾಗಲಿ. ನಾವೆಲ್ಲರೂ ಸೌಹಾರ್ದತೆಯಿಂದ ಬಾಳ ಬೇಕು. ಏನೇ ಭಿನ್ನಾಭಿಪ್ರಾಯ ಇದ್ದರೂ ಹಿರಿಯರೊಂದಿಗೆ ಚರ್ಚಿಸಿ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಮುಂದಡಿ ಇಡೋಣ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಪಾಂಗಾಳ ಬಾಬು ಕೊರಗ ಅವರು ಮಾತನಾಡಿ, ಹಿಂದೂಗಳಲ್ಲಿ ಬಂಟ ಸಮಾಜ ಮಾತ್ರ ಕೊರಗರನ್ನು ಎಂದಿಗೂ ಅಸ್ಪ್ರಶ್ಯರಾಗಿ ಕಾಣದೆ ಪ್ರೀತಿಯಿಂದ ಕಂಡರು. ಎಂದರು.
ಮುಖ್ಯ ಅತಿಥಿಯಾಗಿದ್ದ, ಮಂಗಳೂರು ವಿವಿಯ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಮಾತನಾಡಿ ಎಲ್ಲರಿಗೂ ಮಾದರಿಯಾಗಿ ಗಣೇಶೋತ್ಸವ ಸಂಘಟಿಸುತ್ತಿರುವ ಬಂಟ ಸಮಾಜದ ಕಾರ್ಯ ಶ್ಲಾಘನೀಯ ಎಂದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಯೂನಿಯನ್ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ರಾಜೇಂದ್ರ ಕುಮಾರ್, ಕರ್ನಾಟಕ ತಿಯೋಸಫಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ವಾಟ್ಸನ್, ಉರ್ವ ಮಾರಿಯಮ್ಮದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್ ಮುಖ್ಯ ಅತಿಥಿಗಳಾಗಿದ್ದರು.
ವಿವಿಧ ಸಂಘಗಳ ಅಧ್ಯಕ್ಷರುಗಳಾದ ರವೀಂದ್ರ ರೈ, ವಸಂತ ಶೆಟ್ಟಿ, ರಾಮಚಂದ್ರ ಕಾವ, ತಿಮ್ಮಯ್ಯ ಶೆಟ್ಟಿ, ಟ್ರಸ್ಟಿ ನಿಟ್ಟೆಗುತ್ತು ರವಿರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಿದ್ಧಿ ವಿನಾಯಕ ಪ್ರತಿಷ್ಟಾನದ ಆಡಳಿತ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ ಬೈಲ್ ಹಾಗೂ ಕವಿತಾ ಪಕ್ಕಳ ನಿರೂಪಿಸಿದರು. ಉಲ್ಲಾಸ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಸಮಿತಿಯ ಸಂಚಾಲಕ ಕಿರಣ್ ಪಕ್ಕಳ ವಂದಿಸಿದರು.

LEAVE A REPLY

Please enter your comment!
Please enter your name here