ಬೆಂಗಳೂರು: ಮದುವೆಯಾಗಿ ಕೇವಲ ಮೂರೇ ವರ್ಷಕ್ಕೆ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 26 ವರ್ಷದ ಗೃಹಿಣಿ ಶಿಲ್ಪಾ ಎಂಬಾಕೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಇದನ್ನು ಆಕೆಯ ಪೋಷಕರು ವರದಕ್ಷಿಣೆಗಾಗಿ ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಯಾಕಂದರೆ ಕಳೆದ ಕೆಲವು ತಿಂಗಳಿನಿಂದ ವರದಕ್ಷಿಣೆಗಾಗಿ ಜಗಳ, ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.
ಒಂದೂವರೆ ವರ್ಷದ ಕಂದನ ಅಗಲಿದ ಶಿಲ್ಪಾ!
ಶಿಲ್ಪಾ, ಮೂಲತಃ ಹುಬ್ಬಳ್ಳಿಯವರಾದ ಶಾರದ ಬಸಯ್ಯ ದಂಪತಿಯ ಹಿರಿಯ ಮಗಳು. ಇವರ ಕುಟುಂಬವು 20 ವರ್ಷಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು. ಶಿಲ್ಪಾ, ಬಿಟೆಕ್ ಪದವೀಧರೆಯಾಗಿದ್ದು, ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿದ್ದರು. ಮೂರು ವರ್ಷಗಳ ಹಿಂದೆ, 2022ರಲ್ಲಿ, ಪ್ರವೀಣ್‌ನೊಂದಿಗೆ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ದಂಪತಿಗೆ ಒಂದೂವರೆ ವರ್ಷದ ಮಗುವಿದೆ, ಮತ್ತು ಶಿಲ್ಪಾ ಇದೀಗ ಮತ್ತೆ ಗರ್ಭಿಣಿಯಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
160 ಗ್ರಾಂ ಚಿನ್ನ, 50 ಲಕ್ಷ ಖರ್ಚು ಮಾಡಿ ಮದುವೆ!
ಶಿಲ್ಪಾ ಅವರ ಕುಟುಂಬವು ಮದುವೆಗಾಗಿ 50 ಲಕ್ಷ ರೂ. ಖರ್ಚು ಮಾಡಿದ್ದು, 160 ಗ್ರಾಂ ಚಿನ್ನಾಭರಣ ಮತ್ತು ಸ್ವಲ್ಪ ಹಣವನ್ನು ನೀಡಿದ್ದರಂತೆ. ಅಲ್ಲದೇ ಇತ್ತೀಚೆಗೆ, ಕಳೆದ ಮೂರು ತಿಂಗಳ ಹಿಂದೆಯೂ 10 ಲಕ್ಷ ರೂ. ನೀಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೂ ನಮ್ಮ ಮಗಳಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ, ಜಗಳ ಮಾಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!
ಆಗಸ್ಟ್ 26ರ ರಾತ್ರಿ ಶಿಲ್ಪಾ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆದರೆ, ಈ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂದು ಶಿಲ್ಪಾ ಅವರ ಕುಟುಂಬಸ್ಥರು ಆರೋಪಿಸಿದ್ದು, ವರದಕ್ಷಿಣೆ ಕಿರುಕುಳವೇ ಈ ದುರ್ಘಟನೆಗೆ ಕಾರಣ ಎಂದು ದೂರಿದ್ದಾರೆ. ಸದ್ಯ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಲ್ಪಾ ಅವರ ಪತಿ ಪ್ರವೀಣ್‌ನನ್ನು ವಶಕ್ಕೆ ಪಡೆಯಲಾಗಿದೆ. ಮೃತದೇಹವನ್ನು ಶಿಲ್ಪಾ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ.
ವರದಕ್ಷಿಣೆ ಕಿರುಕುಳದ ಆರೋಪ!
ಶಿಲ್ಪಾ ಅವರ ತಾಯಿ ಶಾರದಾ ಮತ್ತು ಚಿಕ್ಕಪ್ಪ ಚೆನ್ನಬಸಯ್ಯ ಅವರ ಹೇಳಿಕೆಯ ಪ್ರಕಾರ, ಪ್ರವೀಣ್ ಮತ್ತು ಅವನ ಕುಟುಂಬಸ್ಥರು ಶಿಲ್ಪಾ ಅವರಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. “ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ಮಾಡುತ್ತಿದ್ದ. ಮೂರು ತಿಂಗಳ ಹಿಂದೆ ಶಿಲ್ಪಾ ಮನೆಗೆ ಬಂದಿದ್ದಳು, ಆದರೆ ಪ್ರವೀಣ್ ಕುಟುಂಬಸ್ಥರು ರಾಜಿ ಪಂಚಾಯಿತಿ ಮಾಡಿ ಆಕೆಯನ್ನು ವಾಪಸ್ ಕರೆದೊಯ್ದರು,” ಎಂದು ಶಾರದಾ ತಿಳಿಸಿದ್ದಾರೆ. ಚೆನ್ನಬಸಯ್ಯ ಅವರು, “ಪ್ರವೀಣ್ ತಾನು ಬಿಇ, ಎಂಟೆಕ್ ಪದವೀಧರ ಎಂದು ಹೇಳಿಕೊಂಡಿದ್ದ, ಆದರೆ ಕಳೆದ ಎರಡು ವರ್ಷಗಳಿಂದ ಪಾನಿಪುರಿ ಮಾರಾಟ ಮಾಡುತ್ತಿದ್ದಾನೆ. ಶಿಲ್ಪಾ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದರೂ, ಆಕೆಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು,” ಎಂದು ಆರೋಪಿಸಿದ್ದಾರೆ.