ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಕೊಂಕಣಿ ಭಾಷಾ ಚಳುವಳಿಯ ನಾಯಕ ಹಾಗೂ ಕಲಾಪೋಷಕ ಶ್ರೀ ಎರಿಕ್ ಒಜಾರಿಯೊ ಅವರ ನಿಧನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕೊಂಕಣಿ ಭಾಷೆ ,ಸಾಹಿತ್ಯ ಹಾಗೂ ಕಲಾ ಪ್ರಕಾರಗಳಿಗೆ ಅನನ್ಯವಾದ ಕೊಡುಗೆ ನೀಡಿರುವ ಎರಿಕ್ ಒಜಾರಿಯೊ ಅವರು ಕೊಂಕಣಿ ಅಕಾಡೆಮಿಯನ್ನು ಕಟ್ಟಿ ಬೆಳೆಸುವಲ್ಲಿಯೂ ಗುರುತರವಾದ ಕೊಡುಗೆಯನ್ನು ನೀಡಿದವರು. ತುಳು ಭಾಷಾ ಅಭಿಮಾನಿಯಾಗಿದ್ದ ಎರಿಕ್ ಅವರು ತುಳುನಾಡಿನ ಸಾಮರಸ್ಯ ಬದುಕಿನ ಆಶಯವನ್ನು ಮುನ್ನಡೆಸಲು ಅಪಾರವಾಗಿ ಶ್ರಮಿಸಿದವರು ಎಂದು ಅವರು ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.