ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಹಾಗೂ ಕ್ರೀಡಾ ಭಾರತಿ ಹೆಬ್ರಿ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಸಂಸ್ಥೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್. ಎಂ. ಎಸ್. ಪದವಿಪೂರ್ವ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರಾದ ಗ್ರೆಗರಿ ಡಿಸಿಲ್ವ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಧ್ಯಾನ್ ಚಂದ್ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿ , ದಿನಕ್ಕೆ ಒಂದು ಗಂಟೆ ಕಡ್ಡಾಯವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಅದು ನಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ರೀಡಾ ಸಾಧಕರಿಗೆ ನಾವು ಸದಾ ಪ್ರೋತ್ಸಾಹವನ್ನು ನೀಡುತ್ತೇವೆ ಎಂದರು. ನಿಟ್ಟೆ ವಿಶ್ವವಿದ್ಯಾನಿಲಯದ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರಾದ ರಾಜಾರಾಮ್ ಶೆಟ್ಟಿ, ಬೇಳಂಜೆ ಇವರಿಗೆ ಅಮೃತ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಕಬಡ್ಡಿ ಆಟಗಾರ ಸೃಜನ್ ಶೆಟ್ಟಿ ಮುನಿಯಾಲು ಅವರ ತಾಯಿ ಸುಜಾತ ಶೆಟ್ಟಿ ಯವರಿಗೆ ಜೀಜಾಮಾತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾದ ಗ್ರೆಗರಿ ಡಿಸಿಲ್ವ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿರುವ ಕ್ರೀಡಾ ಭಾರತಿ ಹೆಬ್ರಿ ತಾಲೂಕಿನ ಅಧ್ಯಕ್ಷರಾದ ಸೀತಾನದಿ ವಿಟ್ಟಲ್ ಶೆಟ್ಟಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ಆಟ ಮತ್ತು ಪಾಠ ಒಂದಕ್ಕೊಂದು ಪೂರಕ. ಒಂದು ನಿರ್ದಿಷ್ಟವಾದ ಸಮಯವನ್ನು ಆಟಕ್ಕೆ ನಿಗದಿಯಾಗಿಟ್ಟು ಚೆನ್ನಾಗಿ ಅಭ್ಯಾಸವನ್ನು ಮಾಡಿ ಎಂದರು. ಕ್ರೀಡಾ ಭಾರತಿ ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಸನ್ನ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಎಂ. ಸಿ. ಎ. ದೈಹಿಕ ಶಿಕ್ಷಣ ಮಹಾವಿದ್ಯಾಲಯ ಬೆಂಗಳೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ವಾಸುದೇವ ಭಟ್ , ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಕ್ರೀಡಾ ಭಾರತಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಸಂಸ್ಥೆಯ ಉದ್ಯೋಗಿ ಪ್ರಭಾವತಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ವೃಂದ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಭೂತರಾದರು. ವಿದ್ಯಾರ್ಥಿನಿ ಅನುಷಾ ನಾಯಕ್ ನಿರೂಪಿಸಿ ವಂದಿಸಿದಳು.