ಮೈಸೂರು ಚಾಮುಂಡಿ ಬೆಟ್ಟದ ಕುರಿತು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಇವರು ನೀಡಿದ “ಚಾಮುಂಡಿ ಬೆಟ್ಟವು ಹಿಂದೂಗಳ ಸ್ವತ್ತಲ್ಲ” ಎಂಬ ಹೇಳಿಕೆಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಚಾಮುಂಡಿ ಬೆಟ್ಟವು ಸಾರ್ವಜನಿಕ ಸ್ವತ್ತು ಅಲ್ಲ, ಅದು ಅತೀ ಪ್ರಾಚೀನದಿಂದಲೂ ಹಿಂದೂಗಳ ಧಾರ್ಮಿಕ ಕೇಂದ್ರವಾಗಿದ್ದು, ಹಿಂದೂಗಳ ಸ್ವತ್ತಾಗಿದೆ ಎಂಬುದು ತ್ರಿಕಾಲ ಸತ್ಯ. ದೇಶ-ವಿದೇಶಗಳಿಂದ ಅನೇಕ ಹಿಂದೂ ಭಕ್ತರು ಭಕ್ತಿಭಾವದಿಂದ ಚಾಮುಂಡೇಶ್ವರಿ ದೇವಿಯನ್ನು ದರ್ಶನ ಮಾಡಲು ಆಗಮಿಸುವರು.
ಈ ರೀತಿಯ ಹೇಳಿಕೆಗಳು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಗಂಭೀರ ಹಾನಿ ಮಾಡುತ್ತವೆ. ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ. ಮನಮೋಹನ ಸಿಂಗ್ ಅವರು ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸಲ್ಮಾನರದ್ದಾಗಿದೆ ಎಂದು ಹೇಳಿಕೆಯನ್ನು ನೀಡಿದ್ದರು. ಸದ್ಯ ಅದೇ ಪಕ್ಷದ ಉಪಮುಖ್ಯಮಂತ್ರಿಗಳು ಈ ರೀತಿಯ ಹೇಳಿಕೆ ನೀಡುವುದರಲ್ಲಿ ಯಾವುದೇ ಆಶ್ಚರ್ಯ ಪಡಬೇಕಿಲ್ಲ. ಈ ದೇಶದಲ್ಲಿ ಮಸೀದಿ ಅಥವಾ ವಕ್ಫ್ ಬೋರ್ಡ್ ಆಸ್ತಿ ಕೇವಲ ಮುಸಲ್ಮಾನರದ್ದಲ್ಲ ಅದು ಎಲ್ಲರಿಗೂ ಸಂಬಂಧಪಟ್ಟದ್ದು ಎಂದು ಹೇಳಿಕೆ ನೀಡುವ ಧೈರ್ಯ ಉಪಮುಖ್ಯ ಮಂತ್ರಿಗಳಿಗೆ ಇದೆಯೇ? ಯಾವುದೇ ಚರ್ಚ್ ಬಗ್ಗೆ ಹೇಳಿಕೆ ನೀಡುವಾಗ ಇದು ಕೇವಲ ಕ್ರೈಸ್ತರ ಆಸ್ತಿ ಅಲ್ಲ ಎಲ್ಲರಿಗೂ ಸಂಬಂಧಪಟ್ಟದ್ದು ಎಂದು ಹೇಳುವ ಧೈರ್ಯ ತೋರುತ್ತಾರಾ?
ಚಾಮುಂಡಿ ಬೆಟ್ಟದ ನಿಯಂತ್ರಣ ಸರಕಾರ ಮಾಡುತ್ತಿರಬಹುದು ಆದರೆ ಮಾಲಿಕತ್ವ ಹಿಂದೂಗಳಿಗೆ ಇದೆ ಎಂಬುವುದನ್ನು ಉಪಮುಖ್ಯಮಂತ್ರಿಗಳು ತಿಳಿದುಕೊಂಡು ಹೇಳಿಕೆ ನೀಡಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.