ಸಜೀಪಮುನ್ನೂರು: ಯಕ್ಷಗಾನ ಅರ್ಧದಲ್ಲಿಯೇ ನಿಲ್ಲಿಸಿದ ಪೊಲೀಸರು! ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ

0
213

ದಕ್ಷಿಣ ಕನ್ನಡ ಜಿಲ್ಲೆಯ ಸಜೀಪಮುನ್ನೂರಿನಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ಪೊಲೀಸರು ಅರ್ಧದಲ್ಲಿ ನಿಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಕಲಾವಿದರು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಡಿಜೆ, ಪಬ್ ನಡೆಸಲು ತಡರಾತ್ರಿ ವರೆಗೆ ಅವಕಾಶ ಇದೆ, ದಕ್ಷಿಣ ಕನ್ನಡದಲ್ಲಿ ಯಕ್ಷಗಾನದಂಥ ಸಾಂಸ್ಕೃತಿಕ ಕಲೆ ನಡೆಸಲು ಯಾಕೆ ಅವಕಾಶ ಇಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನ ಪ್ರಶ್ನಿಸಿದ್ದಾರೆ.

ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂಬ ನಿಯಮವನ್ನು ಮುಂದಿಟ್ಟು ಯಕ್ಷಗಾನ, ನಾಟಕ ಮತ್ತಿತರ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸುವ ಘಟನೆಗಳು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚೆಚ್ಚು ವರದಿಯಾಗುತ್ತಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಅರ್ಧದಲ್ಲಿಯೇ ನಿಲ್ಲಿಸಿದ ಬಗ್ಗೆ ವರದಿಯಾಗಿವೆ.

ಸಜೀಪಮುನ್ನೂರಿನಲ್ಲಿ ನಡೆದಿದ್ದೇನು?

ಗಣೇಶೋತ್ಸವದ ಪ್ರಯುಕ್ತ ಸಜೀಪಮುನ್ನೂರಿನಲ್ಲಿ ‘ವಿನಾಯಕ ಶಂಕರನಾರಾಯಣ ದುರ್ಗಾಂಬಾ ಯಕ್ಷಗಾನ ತಂಡ ನಂದಾವರ’ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ರಾತ್ರಿ ಹತ್ತು ಗಂಟೆ ವೇಳೆಗೆ ಸ್ಥಳಕ್ಕೆ ಬಂದ ಪೊಲೀಸರು ಪ್ರದರ್ಶನವನ್ನು ಮಟಕುಗೊಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

‘ತಡರಾತ್ರಿ ವರೆಗೂ ಡಿಜೆ, ಪಬ್​ಗೆ ಅನುಮತಿ: ಯಕ್ಷಗಾನಕ್ಕೇಕಿಲ್ಲ?’

‘‘ಕರ್ನಾಟಕ ಸರ್ಕಾರವು ನೂರಾರು ವರ್ಷಗಳ ಹಳೆಯ ಸಾಂಸ್ಕೃತಿಕ ಕಲೆ ಯಕ್ಷಗಾನವನ್ನು ಮೂಟಕುಗೊಳಿಸುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಡಿಜೆ, ಪಬ್ ಇತ್ಯಾದಿಗಳನ್ನು ತಡರಾತ್ರಿವರೆಗೂ ನಡೆಸಲು ಅವಕಾಶವಿದೆ. ಆದರೆ ಪೊಲೀಸರು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಡೆಯೊಡುತ್ತಿದ್ದಾರೆ. ತುಳುನಾಡು ಪ್ರತ್ಯೇಕ ರಾಜ್ಯವಾಗಬೇಕು ಎಂಬುದಕ್ಕೆ ಇದು ಮತ್ತೊಂದು ಕಾರಣ. ನಮ್ಮ ದೇಶೀ ಸಂಸ್ಕೃತಿ ಮತ್ತು ಭಾಷೆಯನ್ನು ನಾವು ಉಳಿಸಿಕೊಳ್ಳಬೇಕಿದೆ’’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ಬಳಕೆದಾರ ವಿಜೆ ಎಂಬವರು ಪೋಸ್ಟ್ ಮಾಡಿದ್ದಾರೆ.

ಯಕ್ಷಗಾನ ಪ್ರದರ್ಶನ ಮುಟಕುಗೊಳಿಸಿದ ವಿಡಿಯೋ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದ ದೇವದಾಸ್ ಕಾಪಿಕಾಡ್ ಅವರ ಕಾರ್ಯಕ್ರಮವೊಂದನ್ನು ಇದೇ ರೀತಿ ಅರ್ಧದಲ್ಲಿ ನಿಲ್ಲಿಸಲು ಮುಂದಾದ ಘಟನೆ ಇತ್ತೀಚೆಗೆ ನಡೆದಿತ್ತು. ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಅವರು, ಕಾನೂನಿನ ಬಗ್ಗೆ ನಮಗೆ ಗೌರವ ಇದೆ. ಆದರೆ ನಮ್ಮಂತಹ ಬಡ ಕಲಾವಿದರ ಹೊಟ್ಟೆ ಹೊಡೆಯುವ ಕೆಲಸವನ್ನು ಸರ್ಕಾರ ಮಾಡಬಾರದು. ನಮ್ಮ ನಾಟಕ ಅಥವಾ ಯಕ್ಷಗಾನಗಳಿಂದಾಗಿ ಜಿಲ್ಲೆಯಲ್ಲಿ ಶಾಂತಿ ಕದಡಿದ ಅಥವಾ ಗಲಾಟೆ, ಗಲಭೆಗಳಾದ ಯಾವುದೇ ಉದಾಹರಣೆ ಇಲ್ಲ. 38 ವರ್ಷದ ನನ್ನ ರಂಗಭೂಮಿ ಜೀವನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ನನ್ನ ಪ್ರದರ್ಶನ ಸ್ಥಗಿತಗೊಳಿಸಿರುವುದು ಬೇಸರ ತಂದಿದೆ. ಸರ್ಕಾರವು ನಾಟಕ ಮತ್ತು ಯಕ್ಷಗಾನ ಕಲಾವಿದರ ಅಳಲನ್ನು ಕೇಳಬೇಕು ಎಂದು ಮನವಿ ಮಾಡಿದ್ದರು.

ವಿಧಾನಸಭೆ ಕಲಾಪದಲ್ಲೂ ಚರ್ಚೆಗೀಡಾಗಿದ್ದ ಕಾನೂನು VS ಸಂಸ್ಕೃತಿ ವಿಚಾರ

ದಕ್ಷಿಣ ಕನ್ನಡ ಜಿಲ್ಲೆಯ ನಾಟಕ, ಯಕ್ಷಗಾನ ಮತ್ತು ಇತರ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಂಬಂಧಪಟ್ಟ ವಿಚಾರವಾಗಿ ಇತ್ತೀಚೆಗೆ ನಡೆದ ವಿಧಾನಸಬೆ ಕಲಾಪದಲ್ಲೂ ಚರ್ಚೆಯಾಗಿತ್ತು. ಯಕ್ಷಗಾನ, ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸ್ವಲ್ಪ ವಿನಾಯಿತಿ ನೀಡಿ ಕಲಾವಿದರಿಗೆ ನೆರವಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಹಾಗೂ ಇತರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸ್ಪೀಕರ್ ಯುಟಿ ಖಾದರ್ ಕೂಡ, ಕಾನೂನು ಮತ್ತು ಸಂಪ್ರದಾಯ ಎಂಬುದು ಬಂದಾಗ ಸಂಪ್ರದಾಯದ ವಿಚಾರದಲ್ಲಿ ಕೆಲವು ಸಡಿಲಿಕೆಗಳನ್ನು ನೀಡಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಾಂಗ್ರೆಸ್​​ನ ಕೆಲವು ಶಾಸಕರಿಂದ ಇದಕ್ಕೆ ತೀವ್ರ ಆಕ್ಷೇಪ ಕೂಡ ವ್ಯಕ್ತವಾಗಿತ್ತು.

ವಿನಾಯಿತಿ ನೀಡಲೇಬಾರದು ಎಂದಿದ್ದ ಕಾಂಗ್ರೆಸ್ ಶಾಸಕ

ಬಿಜೆಪಿಯು ಸಂವಿಧಾನ ವಿರೋಧಿಯಾಗಿದ್ದು, ಕಾನೂನು ಉಲ್ಲಂಘಿಸುವಂತೆ ವಿಧಾನಸಭೆಯಲ್ಲಿ ಮನವಿ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದ್ದು, ಈ ಚರ್ಚೆಗೇ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಬಿಜೆಪಿ ಶಾಸಕರು, ಕಾನೂನು ಉಲ್ಲಂಘಿಸಬೇಕೆಂದು ನಾವು ಹೇಳುತ್ತಿಲ್ಲ. ಆದರೆ, ಕಲಾವಿದರ ಜೀವನಕ್ಕೆ ತೊಂದರೆಯಾಗುವುದರಿಂದ ಸ್ವಲ್ಪ ವಿನಾಯಿತಿ ನೀಡಿ ಎಂದಷ್ಟೇ ಕೇಳುತ್ತಿದ್ದೇವೆ ಎಂದಿದ್ದರು. ಅಂತಿಮವಾಗಿ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿ ತೊಡಕು ಉಂಟಾಗದಂತೆ ನೋಡಿಕೊಳ್ಳುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಆದರೆ, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ, ನಾಟಕ ಇತ್ಯಾದಿ ಪ್ರದರ್ಶನಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ಮುಂದುವರೆದಿದೆ. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here