ಅಕ್ರಮ ಸಂಪತ್ತಿನಿಂದ ಜೀವನದಲ್ಲಿ ನೆಮ್ಮದಿಯಿಲ್ಲ: ನ್ಯಾ. ಸಂತೋಷ ಹೆಗ್ಡೆ
ಹೆಬ್ರಿ : ನಾವು ಅಕ್ರಮವಾಗಿ ಸಂಪತ್ತನ್ನು ಸಂಪಾದಿಸಿದರೇ ಅದರಿಂದ ಖಂಡಿವಾಗಿಯೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ. ಎಲ್ಲೆಡೆಯೂ ಭಯ ಕಾಡುತ್ತಿರುತ್ತದೆ. ನಮಗೆ ಒಳ್ಳೇಯ ಜೀವನ, ಉದ್ಯೋಗಗಳು, ಸಂಪಾದನೆ ಸಂಪತ್ತು ಬೇಕು ನಿಜ, ಅದನ್ನು ನ್ಯಾಯ ಮಾರ್ಗದಲ್ಲಿ ಪಡೆಯೋಣ ಎಂದು ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಹೇಳಿದರು.
ಅವರು ಭಾನುವಾರ ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ೫ ದಿನಗಳ ಕಾಲ ನಡೆದ ಸುವರ್ಣ ಸಂಭ್ರಮದ ಗಣೇಶೋತ್ಸವದ ಸಂಪನ್ನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮಗೆ ಜೀವನದಲ್ಲಿ ತೃಪ್ತಿಯೊಂದು ಇದ್ದರೆ ನಾವು ಎಲ್ಲವನ್ನೂ ನಿಗ್ರಹಿಸಲು ಸಾಧ್ಯವಾಗುತ್ತದೆ. ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಸ್ವಾಗತಿಸುವ ಈ ಕಾಲದಲ್ಲಿ ನಮ್ಮ ಕಾಲದವರಿಂದ ಬದಲಾವಣೆ ಅಸಾಧ್ಯ. ವಿದ್ಯಾರ್ಥಿಗಳಿಗೆ ಈಗಿನ ವಾಸ್ತವವನ್ನು ಮನದಟ್ಟು ಮಾಡಿಸಿದಾಗ ಮುಂದೆ ಮಹಿಳೆಯರು ಮತ್ತು ಮಕ್ಕಳಿಂದ ನಾಡಿನಲ್ಲಿ ಬದಲಾವಣೆಯನ್ನು ತರಬಹುದು ಎಂಬುದು ನನ್ನ ಭಾವನೆ ಎಂದರು.
ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಎಚ್. ಜನಾರ್ಧನ್ ಅಧ್ಯಕ್ಷತೆ ವಹಿಸಿ ಮಾತನಾಡಿ ೫ ದಿನಗಳ ಕಾಲ ನಡೆದ ಗಣೇಶೋತ್ಸವ ಸುವರ್ಣ ಸಂಭ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಗಣೇಶೋತ್ಸವ ಸಮಿತಿಯಲ್ಲಿ ಸೇವೆ ಸಲ್ಲಿಸಿ ನಿಧನರಾದ ಹಲವರಿಗೆ ಸುವರ್ಣ ಸ್ಮೃತಿ ಗೌರವ ಸಮರ್ಪಣೆ ನಡೆಯಿತು. ಸಾಹಿತಿ ಮಂಡ್ಯದ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರಿಗೆ ಸುವರ್ಣ ಪುರಸ್ಕಾರ ಪ್ರದಾನ ಮಾಡಲಾಯಿತು.ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್.ಜನಾರ್ಧನ್ ಅವರನ್ನು ಗೌರವಿಸಲಾಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪಕ ಪದಾಧಿಕಾರಿಗಳಾದ ಅಮರನಾಥ ಹೆಗ್ಡೆ, ಮೋಹನದಾಸ ನಾಯಕ್, ಗಣೇಶ ನಾಯಕ್ ಮಂಗಳೂರು, ಕೆರೆದಂಡೆ ಲಕ್ಷ್ಮಣ ನಾಯಕ್, ರಾಜೀವ ಶೆಟ್ಟಿ ಕುಚ್ಚೂರು, ಚಂದ್ರಶೇಖರ ಹೆಗ್ಡೆ ಮುದ್ರಾಡಿ, ಕೆ.ಜಿ.ಗೋಪಾಲಕೃಷ್ಣ ಶಿರಿಯಾರ, ಎಚ್. ಗುಂಡೂ ನಾಯಕ್, ಎಚ್. ಭಾಸ್ಕರ ಜೋಯಿಸ್, ಪ್ರಕಾಶ ಮಲ್ಯ, ಗೋಕುಲದಾಸ ಶೆಣೈ ಉಡುಪಿ, ಶ್ರೀಕಾಂತ ಆಚಾರ್ಯ ಹೆಬ್ರಿ, ಶಶಿಧರ ಶೆಣೈ ಹೆಬ್ರಿ, ನಾಗಯ್ಯ ಶೆಟ್ಟಿ ಚಾರ, ಮನೋಹರ ಪ್ರಭು ಹೆಬ್ರಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಅನ್ನದಾನದ ಸೇವಾದಾರರು ಮತ್ತು ಗಣೇಶೋತ್ಸವ ಸುವರ್ಣ ಸಂಭ್ರಮದ ಯಶಸ್ಸಿಗೆ ದುಡಿದ ವಿವಿಧ ಉಪ ಸಮಿತಿಗಳ ಸಂಚಾಲಕರು, ಪ್ರಮುಖರು, ಸದಸ್ಯರನ್ನು ಗೌರವಿಸಲಾಯಿತು. ಕಾರ್ಕಳ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸಭಾ ಕಾರ್ಯಕ್ರಮದಲ್ಲಿ ಸಾಹಿತಿ ಮಂಡ್ಯದ ಡಾ. ಪ್ರದೀಪ್ ಕುಮಾರ್ ಹೆಬ್ರಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ಅಮರನಾಥ ಹೆಗ್ಡೆ, ಕಾರ್ಯದರ್ಶಿ ಮೋಹನದಾಸ ನಾಯಕ್, ಬೆಂಗಳೂರು ಉದ್ಯಮಿ ಎಂ ಕರುಣಾಕರ ಹೆಗ್ಡೆ, ಹೆಬ್ರಿಯ ಡಾ. ಭಾರ್ಗವಿ ಆರ್ ಐತಾಳ್, ಗೌರವಾಧ್ಯಕ್ಷರಾದ ಎಚ್. ಪ್ರವೀಣ್ ಬಲ್ಲಾಳ್, ಎಚ್. ಭಾಸ್ಕರ ಜೋಯಿಸ್, ಯೋಗೀಶ ಭಟ್, ಗುಂಡೂ ನಾಯಕ್
ಹೆಬ್ರಿ ಸಾರ್ವಜನಿಕ ಶ್ರೀ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್. ರಾಜೇಶ ಆಚಾರ್ಯ ಮಠದಬೆಟ್ಟು, ಗಣೇಶೋತ್ಸವ ಸಮಿತಿ, ಮಹಿಳಾ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಚ್. ಜನಾರ್ಧನ್ ಸ್ವಾಗತಿಸಿ ಪ್ರಸಾದ್ ಶೆಟ್ಟಿ ನಿರೂಪಿಸಿ ರಾಜೇಶ ಆಚಾರ್ಯ ಮಠದಬೆಟ್ಟು ವಂದಿಸಿದರು.
ಹೆಬ್ರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಿಯ ಪ್ರಭಾವಳಿ ಸ್ವರ್ಣ ಕಿರೀಟ ಸಹಿತ ಶ್ರೀಗಣಪತಿ ದೇವರ ಭವ್ಯ ಪುರಮೆರವಣಿಗೆ, ವೈಭವದ ಶೋಭಾಯಾತ್ರೆ ನಡೆಯಿತು. ವಿವಿಧ ಆಕರ್ಷಕ ಟ್ಯಾಬ್ಲೋಗಳು, ಹುಲಿವೇಷ, ಚೆಂಡೆ ಸಹಿತ ನಾಡಿನ ವಿವಿಧ ಕಲಾ ಪ್ರಕಾರಗಳ ವೇಷಭೂಷಣಗಳು ಮೆರವಣಿಗೆಗೆ ವಿಶೇಷ ಕಳೆ ನೀಡಿದವು.

