ಉಜಿರೆ: ದಶಲಕ್ಷಣ ಪರ್ವವು ಸರ್ವ ಪರ್ವಗಳ ರಾಜನಾಗಿದ್ದು, ಉತ್ತಮ ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯ ಎಂಬ ದಶಧರ್ಮಗಳ ಪಾಲನೆಯಿಂದ ಮುನಿಯಾಗುವ ಯೋಗವೂ, ಭಾಗ್ಯವೂ ಪ್ರಾಪ್ತಿಯಾಗುತ್ತದೆ ಎಂದು ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಶನಿವಾರ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಯಾತ್ರಿನಿವಾಸದಲ್ಲಿ ಕ್ಷಮಾವಳಿಯೊಂದಿಗೆ ದಶಲಕ್ಷಣ ಪರ್ವದ ಸಮಾರೋಪ ಸಮಾರಂಭದಲ್ಲಿ ಮಂಗಲಪ್ರವಚನ ನೀಡಿದರು.
ದಶಧರ್ಮಗಳು ಮನಸ್ಸನ್ನು ಸುಂದರಗೊಳಿಸಿ ವಿವೇಕ ಪ್ರಾಪ್ತಿಗೆ ಪ್ರೇರಕವಾಗಿವೆ. ಅನುಕಂಪ ಮತ್ತು ಕರುಣೆಯೊಂದಿಗೆ ಅಹಿಂಸೆಯ ಪಾಲನೆ ಮಾಡಿದಾಗ ಕ್ಷಮಾ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಅಜ್ಞಾನ ಮತ್ತು ಮಿಥ್ಯತ್ವವನ್ನು ತ್ಯಜಿಸಿ, ದರ್ಶನಗಳಲ್ಲಿ ಸಮನ್ವಯತೆಯನ್ನು ಸಾಧಿಸಿ, ವಿವೇಕದೊಂದಿಗೆ ಸರ್ವಜೀವಿಗಳಲ್ಲಿಯೂ ಅಹಿಂಸೆಯನ್ನು ತೋರಿದಾಗ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ. ಸದಾ ಸತ್ಯ, ಧರ್ಮ, ನ್ಯಾಯ, ನೀತಿಯ ಪಾಲನೆಯೊಂದಿಗೆ ಸದಾಚಾರದೊಂದಿಗೆ ವರ್ತಮಾನದ ಬದಕಿನ ಸವಾಲುಗಳನ್ನು ಕ್ಷಮಾಗುಣದೊಂದಿಗೆ ತಾಳ್ಮೆ ಮತ್ತು ಸಂಯಮದಿಂದ ಸುಲಭದಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸ್ವಾಮೀಜಿಯವರ ನೇತೃತ್ವದಲ್ಲಿ ಸರ್ವರೂ ಪರಸ್ಪರ ಕ್ಷಮೆ ಯಾಚಿಸಿ ಎಲ್ಲರಿಗೂ ಶುಭ ಹಾರೈಸಿ ಕ್ಷಮಾವಳಿ ಆಚರಿಸಿದರು. ಧಾರ್ಮಿಕ ಉಪನ್ಯಾಸ ನೀಡಿದ ಮೂಡಬಿದ್ರೆ ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಭಾತ್ ಬಲ್ನಾಡ್, ಜೈನಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ವೇದಗಳ ಕಾಲದಲ್ಲಿಯೂ ಆಚರಣೆಯಲ್ಲಿತ್ತು. ಕರ್ಮಸಿದ್ಧಾಂತದ ಪ್ರಕಾರ ನಾವು ಮಾಡಿದ ಕರ್ಮವನ್ನು ಅನುಭವಿಸಲೇಬೇಕು. ಆಧ್ಯಾತ್ಮಿಕ ಚಿಂತನೆಯೊAದಿಗೆ ಜಪ-ತಪ, ನೋಂಪಿ, ಆರಾಧನೆ ಮಾಡಿ ಪಂಚಾಣುವೃತಗಳ ಪಾಲನೆಯೊಂದಿಗೆ ಸರಳ ಜೀವನ ನಡೆಸಿ ಧರ್ಮದ ಅನುಷ್ಠಾನ ಮಾಡಬೇಕು. ದಾನ-ಧರ್ಮಾದಿ ಸತ್ಕಾರ್ಯಗಳಿಂದ ಆತ್ಮನಿಂಗಟಿದ ಕರ್ಮದ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗಿ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕ್ಷಮಾಗುಣ ನಮ್ಮ ದೌರ್ಬಲ್ಯ ಅಲ್ಲ, ವೀರರಿಗೆ ಭೂಷಣವಾಗಿದೆ. ಸಂಯಮದೊಂದಿಗೆ ದೈನಂದಿನ ವ್ಯವಹಾರದಲ್ಲಿ ಕ್ಷಮಾ ಧರ್ಮ ಪಾಲನೆ ಮಾಡಿದರೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಅಶ್ವಿನಿಪ್ರವೀಣ್ ಕುಮಾರ್ ಇಂದ್ರ ಧನ್ಯವಾದವಿತ್ತರು.
ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ಡಾ. ವರ್ಷಾ ಮತ್ತು ಸತ್ಯಪ್ರಸಾದ್ ವಿ. ಜೈನ್ ಸಮಾರಂಭದ ಪ್ರಾಯೋಜಕರಾಗಿ ಸಹಕರಿಸಿದರು.