ಮೌತ್ ಗಾರ್ಡ್ (ಬಾಯಿ ಕವಚ)

0
98

ಮೌತ್ ಗಾರ್ಡ್ ಎನ್ನುವುದು ಬಾಯಿಯ ರಕ್ಷಣಾ ಕವಚವಾಗಿದ್ದು, ಹಲ್ಲು ವಸಡುಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡು ಹಲ್ಲು, ತುಟಿ, ವಸಡುಗಳಿಗೆ ಗಾಯಗಳಾಗದಂತೆ ರಕ್ಷಿಸುತ್ತದೆ. ಇದೊಂದು ತೆಳುವಾದ ಬಾಗಿಸಬಹುದಾದ ವಸ್ತುವಿನಿಂದ ತಯಾರಿಸಿದ ರಕ್ಷಣಾ ಕವಚವಾಗಿದ್ದು ಒಂದು ರೀತಿಯ ಹಲ್ಲುಗಳ ಶಿರಸ್ತ್ರಾಣದಂತೆ ಕೆಲಸ ಮಾಡುತ್ತದೆ. ಅಪಘಾತಗಳಾದಾಗ ಎರಡೂ ದವಡೆಗಳು ಒಂದಕ್ಕೊಂದು ಸೇರಿಕೊಂಡು ಘರ್ಷಣೆಯಾಗದಂತೆ ತಡೆಯುತ್ತದೆ. ಈ ರೀತಿಯ ಹಲ್ಲು ರಕ್ಷಾ ಕವಚಗಳನ್ನು, ದೈಹಿಕವಾಗಿ ಸ್ಪರ್ಶಿಸಿಕೊಂಡು ಆಡುವ ಆಟಗಳಲ್ಲಿ ಹಲ್ಲಿನ ಹಾಗೂ ಅದರ ಸುತ್ತಲಿನ ಅಂಗಾಂಗಗಳನ್ನು ರಕ್ಷಿಸಲು ಬಳಸುತ್ತಾರೆ. ಅದೇ ರೀತಿ ಹಲ್ಲು ಮಸೆತ (ಬ್ರುಕ್ಸಿಸಮ್), ದವಡೆ ಕೀಲು ಸಮಸ್ಯೆ ಪರಿಹಾರಕ್ಕೆ ಕೂಡಾ ಬಳಸುತ್ತಾರೆ. ಯಾವ ರೀತಿಯ ಕೆಲಸಕ್ಕೆ ಬಳಸುತ್ತಾರೆ ಎಂಬುದರ ಮೇಲೆ ಅವಲಂಭಿತವಾಗಿ ಈ ಮೌತ್ ಗಾರ್ಡ್‍ಗಳನ್ನು ಬಾಯಿ ರಕ್ಷಣಾ ಕವಚ, ಮೌತ್ ಫೀಸ್, ವಸಡು ರಕ್ಷಾ ಕವಚ ಅಥವಾ ಗಮ್ ಶೀಲ್ಡ್, ಗಮ್ ಗಾರ್ಡ್ , ನೈಟ್ ಗಾರ್ಡ್, ಬೈಟ್ ಸ್ಪ್ಲಿಂಟ್, ಬೈಟ್ ಪ್ಲೇನ್ ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಒಟ್ಟಿನಲ್ಲಿ ರೋಗಿಯ ಅವಶ್ಯಕತೆಗಳಿಗೆ ಅನುಗುಣವಾಗಿ ಮತ್ತು ಸಮಸ್ಯೆಗೆ ಅನುಗುಣವಾಗಿ ಹಲ್ಲಿನ ಅಳತೆ ತೆಗೆದು ಈ ರೀತಿಯ ಮೌತ್ ಗಾರ್ಡ್‍ಗಳನ್ನು ತಯಾರಿಸಿ ನೀಡಲಾಗುತ್ತದೆ ಮತ್ತು ಹಲ್ಲಿನ ಹಾಗೂ ಇತರ ಅಂಗಗಳಿಗೆ ಗಾಯವಾಗದಂತೆ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ.

ಎಲ್ಲಿ ಬಳಸುತ್ತಾರೆ?

  1. ದೈಹಿಕವಾಗಿ ಸ್ಪರ್ಶಿಸಿಕೊಂಡು ಆಡುವ ಆಟಗಳಾದ ಬಾಕ್ಸಿಂಗ್, ರೆಸ್ಲಿಂಗ್, ಕುಸ್ತಿ, ಹಾಕಿ, ಪುಟ್‍ಬಾಲ್, ಬೇಸ್‍ಬಾಲ್ ಮುಂತಾದ ಆಟಗಳಲ್ಲಿ ಹಲ್ಲಿನ ರಕ್ಷಣೆಗಾಗಿ ಮೌತ್ ಗಾರ್ಡ್ ಬಳಸಲಾಗುತ್ತದೆ.
  2. ಹಲ್ಲು ಮಸೆಯುವ ಸಮಸ್ಯೆ ಅಥವಾ ಬ್ರುಕ್ಸಿಸಮ್ ಎಂಬ ಆರೋಗ್ಯ ಸಮಸ್ಯೆ ಇರುವವರು ತಮ್ಮ ಹಲ್ಲುಗಳನ್ನು ಅತಿಯಾಗಿ ಮಸೆಯುವ ಕಾರಣದಿಂದ ಹಲ್ಲು ಸವೆತ ಉಂಟಾಗಿ ಹಲ್ಲಿನ ಸಮಸ್ಯೆ ಉಂಟಾಗಬಹುದು. ಅಂತವರಿಗೆ ನೈಟ್ ಗಾರ್ಡ್ ಎಂಬ ಪ್ಲಾಸ್ಟಿಕ್ ಸಾಧನ ಬಳಸಿ ಹಲ್ಲಿಗೆ ಘಾಸಿಯಾಗದಂತೆ ತಡೆಯಲಾಗುತ್ತದೆ.
  3. ದವಡೆ ಕೀಲು (ಖಿಒಎ) ಅಥವಾ ಟೆಂಪರೋಮ್ಯಾಂಡಿಬುಲಾರ್ ಜಾಯಿಂಟ್ ಸಮಸ್ಯೆ ಇರುವವರಿಗೆ ದವಡೆ ಕೀಲಿನ ಮೇಲೆ ಹೆಚ್ಚಿನ ಒತ್ತಡ ಬೆಳೆದಂತೆ ಬೈಟ್ ಪ್ಲೇನ್ ಅಥವಾ ಬೈಟ್ ಸ್ಪ್ಲಿಂಟ್ ಎಂಬ ಬಾಯಿ ರಕ್ಷಾ ಕವಚ ಬಳಸಲಾಗುತ್ತದೆ.
  4. ಮುಖ, ಬಾಯಿಯ ದವಡೆ ಮತ್ತು ಹಲ್ಲಿಗೆ ಹೆಚ್ಚು ಗಾಯಗಳಾಗುವ ಗುದ್ದಾಟದ ಆಟಗಳಾದ ಕುಸ್ತಿ, ಬಾಕ್ಸಿಂಗ್, ರೆಸ್ಲಿಂಗ್ ಕ್ರೀಡೆಗಳಲ್ಲಿ ಮೌತ್ ಗಾರ್ಡ್‍ನ ಜೊತೆಗೆ ಪೇಸ್ ಗಾರ್ಡ್ ಅಥವಾ ಮುಖ ಕವಚವನ್ನು ಬಳಸಲಾಗುತ್ತದೆ. ಇದರಿಂದ ಮುಖ, ಹಲ್ಲು ಮತ್ತು ದವಡೆಗೆ ರಕ್ಷಣೆ ಸಿಗುತ್ತದೆ.
  5. ಇನ್ನೂ ಜೋರಾಗಿ ಓಡುವ ಅಥ್ಲೆಟಿಕ್ ಸ್ಪರ್ಧೆಗಳಲ್ಲಿಯೂ ಬಿದ್ದು ಹಲ್ಲು ಮುರಿಯದಂತೆ ಮಾಡಲು ಮೌತ್ ಗಾರ್ಡ್ ಬಳಸುತ್ತಾರೆ. ಹೆಚ್ಚಾಗಿ ಉಬ್ಬು ಹಲ್ಲು ಇರುವವರು ಮತ್ತು ಹೆಚ್ಚು ಕ್ರಮಬದ್ಧವಾಗಿ ಜೋಡಣೆಯಾಗದ ಹಲ್ಲುಗಳು ಇರುವ ಕ್ರೀಡಾ ಪಟುಗಳು ಹೆಚ್ಚು ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಯಾರು ತಯಾರಿಸುತ್ತಾರೆ?

ಮೌತ್ ಗಾರ್ಡ್ ಮತ್ತು ಇನ್ನಿತರ ಬಾಯಿಯೊಳಗೆ ಇಡುವ ಬಾಯಿ ರಕ್ಷಣಾ ಸಾಧನಗಳನ್ನು ದಂತ ವೈದ್ಯರೇ ತಯಾರು ಮಾಡುತ್ತಾರೆ. ಬಾಯಿಯ ಹಲ್ಲಿನ ಅಳತೆ ತೆಗೆದು ಬೈಟ್ ಪ್ಲೇನ್ ಮತ್ತು ಬೈಟ್ ಸ್ಪ್ಲಿಂಟ್‍ಗಳನ್ನು ತಯಾರಿಸಲಾಗುತ್ತದೆ. ಅದೇ ರೀತಿ ಬೇರೆ ಬೇರೆ ಸೈಜ್‍ನ ಬಾಯಿ ರಕ್ಷಣಾ ಸಾಮಾಗ್ರಿಗಳು ಸ್ಪೋಟ್ಸ್ ಶಾಪ್‍ಗಳಲ್ಲಿ ಅಭ್ಯವಿರುತ್ತದೆ. ನಿಮ್ಮ ಹಲ್ಲಿನ ಗಾತ್ರ ಸಂಖ್ಯೆ ಜೋಡಣೆ ಮುಖದ ರಚನೆ, ಗಾತ್ರಕ್ಕೆ ಅನುಗುಣವಾಗಿ ನಿಮ್ಮ ವೈದ್ಯರು ಸೂಚಿಸಿರುವ ಬಾಯಿ ರಕ್ಷಣಾ ಕವಚವನ್ನು ಆಯ್ಕೆ ಮಾಡಬಹುದುದಾಗಿದೆ. ಈ ಬಾಯಿ ರಕ್ಷಣಾ ಕವಚವು ಎರಡು ದವಡೆಗಳ ನಡುವೆ ಇರುವ ಹಲ್ಲುಗಳ ಮಧ್ಯೆ ಭದ್ರವಾಗಿ ಕಚ್ಚಿ ಕುಳಿತು ಕೊಳ್ಳುತ್ತದೆ. ಮುಖಕ್ಕೆ ಅಥವಾ ದವಡೆಗೆ ಏಟು ಬಿದ್ದಾಗ ಹಲ್ಲಿಗೆ ಹೆಚ್ಚಿನ ಒತ್ತಡ ಬೀಳದಂತೆ ಅಥವಾ ಹಲ್ಲು ಮುರಿಯದಂತೆ ರಕ್ಷಿಸುತ್ತದೆ. ಇನ್ನು ಬಾಕ್ಸಿಂಗ್, ರೆಸ್ಲಿಂಗ್ ನಂತಹಾ ಅತೀ ಹೆಚ್ಚು ಗಾಯಗಳಾಗುವ ಸ್ಪರ್ಧೆಗಳಲ್ಲಿ ಹೆಡ್ ಗಿಯರ್ ಮತ್ತು ಪೇಸ್ ಗಾರ್ಡ್ ಎಂಬ ಸಾಧನಗಳನ್ನು ವೈದ್ಯರೇ ನಿರ್ಮಿಸಿ ನೀಡುತ್ತಾರೆ. ಅವರ ಸೂಚನೆಯಂತೆ ಬಳಸಬಹುದಾಗಿದೆ. ಬಾಯಿಯ ಹೊರಭಾಗದಲ್ಲಿ ಬಳಸುವ ಈ ಸಾಧನಗಳನ್ನು ಪ್ರೋಸ್ತೊ ಡಾಂಟಿಸ್ಟ್ ಎಂಬ ವಿಶೇಷ ತಜ್ಞರು ಮುಖದ ಅಳತೆಗನುಸಾರ ತಯಾರು ಮಾಡುತ್ತಾರೆ. ಈಗ ವೈದ್ಯಕೀಯ ಶಾಸ್ತ್ರದಲ್ಲಿ ಸ್ಪೋಟ್ಸ್ ಇಂಜೂರಿ ಸ್ಪೆಷಲಿಸ್ಟ್ ಎಂಬ ಹೊಸದೊಂದು ವಿಭಾಗವೇ ಇದಕ್ಕೆ ಸೃಷ್ಟಿಯಾಗಿದೆ. ಆಟೋಟಗಳಲ್ಲಿ ಉಂಟಾಗುವ ದೈಹಿಕ ತೊಂದರೆಗಳಿಗೆ ಸೂಕ್ತ ಪರಿಹಾರ ನೀಡಲು ಮತ್ತು ದೈಹಿಕ ಆಘಾತಗಳಾಗದಂತೆ ಪರಿಣಾಮಕಾರಿಯಾಗಿ ತಡೆಯಲು ಈ ವಿಭಾಗ ಪ್ರಯತ್ನಿಸುತ್ತದೆ.
ಮೌತ್ ಗಾರ್ಡ್‍ಗಳನ್ನು ಎಥಿಲೀನ್ ವಿನೈಲ್ ಲಿಸಟೇಟ್ ಎಂಬ ಥರ್ಮೋಪ್ಲಾಸ್ಟಿಕ್ ವಸ್ತುವಿನಿಂದ ಮಾಡಲಾಗುತ್ತದೆ. ಈ ವಸ್ತುವನ್ನು ಬಿಸಿ ಮಾಡಿ ಅಥವಾ ಬಿಸಿ ನೀರಿನಲ್ಲಿ ಅದ್ದಿ ಹಲ್ಲಿನ ಮೇಲೆ ಕೂರಿಸಿ ಹಲ್ಲು ಮತ್ತು ವಸಡುಗಳ ರಕ್ಷಣೆ ನೀಡುವಂತಹ ಕವಚವನ್ನು ಮಾಡಲಾಗುತ್ತದೆ. ಈಗ ಹೊಸತಾಗಿ ಮಾರುಕಟ್ಟೆಗೆ ಬಂದ ಥರ್ಮೋಪಾಲಿಮರ್‍ಗಳನ್ನು ಬಳಸಿ ಬಹಳ ಕರಾರುವಕ್ಕಾಗಿ ಹಲ್ಲಿನ ಮೇಲೆ ಕುಳಿತುಕೊಳ್ಳುವ ಮೌತ್ ಗಾರ್ಡ್‍ಗಳನ್ನು ನಿರ್ಮಿಸಲು ಸಾಧ್ಯವಿದೆ. ಅದೇ ರೀತಿ ಬೇರೆ ಬೇರೆ ಬಾಗಿಸಬಹುದಾದ ಪ್ಲಾಸ್ಟಿಕ್‍ಗಳಿಂದ ಮಾಡಿದ ರೆಡಿಮೇಡ್ ಮೌತ್ ಗಾರ್ಡ್‍ಗಳು ಸಣ್ಣ, ಮಧ್ಯಮ, ದೊಡ್ಡ ಹೀಗೆ ಬೇರೆ ಬೇರೆ ಗಾತ್ರಗಳಲ್ಲಿ ಅಭ್ಯವಿದೆ. ವ್ಯಕ್ತಿಯ ಹಲ್ಲಿನ ಗಾತ್ರ, ಜೋಡಣೆ ಮತ್ತು ದವಡೆಯ ರೂಪಕ್ಕೆ ಅನುಗುಣವಾಗಿ ಆಯ್ಕೆ ಮಾಡಬಹುದಾಗಿದೆ.
ಇನ್ನು ಕೆಲವೊಮ್ಮೆ ಮೌತ್ ಗಾರ್ಡ್‍ಗಳನ್ನು ಔಷಧಿಗಳನ್ನು ಹಲ್ಲುಗಳಿಗೆ ಮತ್ತು ವಸಡುಗಳಿಗೆ ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಬಳಸುತ್ತಾರೆ. ಉದಾಹರಣೆಗೆ ಹಲ್ಲಿನ ಬಿಳುಪೀಕರಣ ಅಥವಾ ಬ್ಲೀಚಿಂಗ್ ಮಾಡುವಾಗ ಹಲ್ಲಿನ ಸುತ್ತ ಔಷಧಿ ನಿಲ್ಲುವಂತೆ ಮಾಡಲು ಹಲ್ಲಿನ ಕವಚ ಅಥವಾ ಸ್ಪ್ಲಿಂಟ್ ಬಳಸುತ್ತಾರೆ. ಅದೇ ರೀತಿ ಪೆಂಫಿಗಸ್ ಅಥವಾ ಇನ್ನಾವುದೋ ವಸಡು ಸಂಬಂಧಿ ರೋಗಗಳಲ್ಲಿ ವಸಡಿಗೆ ಸ್ಟಿರಾಯ್ಡ್ ಔಷಧಿ ಸಿಂಪಡಿಸಲು ಗಮ್ ಶೀಲ್ಡ್ ಎಂಬ ಸಾಧನವನ್ನು ಹಲ್ಲು ಮತ್ತು ವಸಡಿನ ಸುತ್ತ ಆವರಿಸುವಂತೆ ಮಾಡಿ ಔಷಧಿಯನ್ನು ವಸಡುಗಳು ಹೀರುವಂತೆ ಮಾಡಲಾಗುತ್ತದೆ.

ಕೊನೆ ಮಾತು:

ದೈಹಿಕವಾಗಿ ಸ್ಪರ್ಶಿಸಿಕೊಂಡು ಆಡುವ ಆಟಗಳಲ್ಲಿ ಆಘಾತಗಳು ಸಹಜವಾದದ್ದೆ. ಇದರಲ್ಲಿ ಸಿಂಹ ಪಾಲು ಮುಖ ಮತ್ತು ಹಲ್ಲುಗಳಿಗೆ ಸಲ್ಲುತ್ತದೆ. ಸುಮಾರು 60 ಶೇಕಡಾದಷ್ಟು ಗಾಯಗಳು ಮುಖ ಮತ್ತು ಹಲ್ಲುಗಳಿಗೆ ಉಂಟಾಗುತ್ತದೆ. ಈ ತೊಂದರೆಗಳಲ್ಲಿ ಹಲ್ಲು ಮುರಿಯುವಿಕೆ, ಹಲ್ಲು ಬೇರು ಸಮೇತ ಹೊರಬರುವುದು, ದವಡೆ ಮೂಳೆ ಮುರಿತ, ದವಡೆ ಕೀಲು ಮುರಿತ ಮುಖ್ಯವಾದವುಗಳಾಗಿದೆ. ಈ ಸಮಸ್ಯೆಗಳನ್ನು ಸುಲಭವಾಗಿ ಮೌತ್ ಗಾರ್ಡ್ ಬಳಸಿ ತಡೆಗಟ್ಟಬಹುದಾಗಿದೆ. ಸರಿಯಾದ ಗಾತ್ರದ ಮತ್ತು ರಚನೆಯ ಮೌತ್ ಗಾರ್ಡ್ ಬಳಸಿದಲ್ಲಿ ಆಟೋಟಗಳಿಂದ ಉಂಟಾಗುವ ದೈಹಿಕ ತೊಂದರೆಗಳು ಮಾನಸಿಕ ಅಡ್ಡ ಪರಿಣಾಮಗಳು ಮತ್ತು ಆರ್ಥಿಕ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ಕ್ರೀಡಾ ದಂತ ವೈದ್ಯ ಶಾಸ್ತ್ರ ಎಂಬ ಕ್ರೀಡಾ ವೈದ್ಯ ಶಾಸ್ತ್ರದ ಅಂಗ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ನಿರಂತರ ಸಂಶೋಧನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ಪರಿಕರಗಳು ಸೃಷ್ಟಿಯಾಗಲಿ ಎಂದು ಹಾರೈಸೋಣ.

ಡಾ|| ಮುರಲೀ ಮೋಹನ್ ಚೂಂತಾರು
ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
MDS,DNB,MOSRCSEd(U.K), FPFA, M.B.A
ಮೊ : 9845135787 drmuraleechoontharu@gmail.com

LEAVE A REPLY

Please enter your comment!
Please enter your name here