ತುಳುವ ಮಂದಾರ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ರಾಮ ಪಾಣರರನ್ನು ಉಡುಪಿ ತುಳುವ ಮಹಾಸಭಾ  ಭೇಟಿ

0
165

ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅಪಾರ ಅಭಿಮಾನಿ ಬಳಗವನ್ನು‌ ಹೊಂದಿರುವ ಸಾಧು ಸ್ವಭಾವದ ಶ್ರೀಯುತ “ರಾಮ ಪಾಣರ” ಇವರನ್ನು ದಿನಾಂಕ 07/09/2025 ರಂದು ಉಡುಪಿ ತಾಲೂಕು ತುಳುವ ಮಹಾಸಭಾದ ಪ್ರಧಾನ ಸಂಚಾಲಕರು ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು, ಸಂಚಾಲಕರಾದ ರಕ್ಷಿತ್ ಮುನಿಯಾಲ್, ಸದಸ್ಯರಾದ ರತನ್ ಮುನಿಯಾಲ್, ಪ್ರೀತಮ್ ಪೆರ್ಡೂರು ಭೇಟಿ ನೀಡಿ ಕುಶಲೋಪಚಾರ ವಿಚಾರಿಸಿದರು.

ತುಳುನಾಡಿನ ಮೂಲ ಆಚರಣೆ ದೈವಾರಾಧನೆ. ಈ ದೈವರಾಧನೆಯಲ್ಲಿ ಇಂದಿನ ಆಡಂಬರಗಳಿಗೆ ಮನ್ನಣೆ ನೀಡದೆ ಹಿಂದಿನ ಕಟ್ಟುಪಾಡು, ರೀತಿ-ರಿವಾಜುಗಳು ನಡೆಯಬೇಕು. ಉಡುಪಿ ತುಳುವ ಮಹಾಸಭೆಯು ದೈವ ನರ್ತಕರನ್ನು ಗುರುತಿಸಿ ಗೌರವಿಸುತ್ತಿರುವುದು ತುಂಬಾ ಸಂತೋಷದ ವಿಚಾರ. ತುಳುವ ಮಹಾಸಭೆಯ ಈ ಕೆಲಸವು ಇನ್ನೂ ಒಳ್ಳೆಯ ರೀತಿಯಲ್ಲಿ ಮುಂದುವರೆಯಲಿ ಎಂದು ಆಶಿಸಿದರು.

ಬದುಕು-ಸಾಧನೆ:-

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದೊಂಡೇರಂಗಡಿ ಎಂಬಲ್ಲಿ ಗುಲಾಬಿ ಹಾಗೂ ದಿವಂಗತ ಕೋಚ ಪಾಣಾರ ದಂಪತಿಗಳ ಪುತ್ರನಾಗಿ ಜನಿಸಿದ ಇವರು 16ನೇ ವಯಸ್ಸಿನಲ್ಲಿಯೇ ಗೆಜ್ಜೆ ಕಟ್ಟಿ ತಮ್ಮ ತಂದೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬು ಸಾಲ್ಯಾನ್ ಬೋಳ ಇವರಿಂದ ತುಳುನಾಡಿನ ಅತ್ಯಂತ ಪ್ರಾಚೀನ ಕಲೆಯಾದ ದೈವ ನರ್ತನ ಮತ್ತು ನೇಮದ ಬಗ್ಗೆ ಅಪಾರ ನೈಪುಣ್ಯತೆಯನ್ನು ಹೊಂದಿರುತ್ತಾರೆ.

ಮುಖದ ತುಂಬಾ ಬಣ್ಣ, ಕೈಯಲ್ಲಿ ಪಂಜು, ಕೊಂಬು ವಾದ್ಯಗಳ ಆರ್ಭಟಗಳ ನಡುವೆ ಕುಣಿಯುವ ದೈವದ ಪರಿ, ಅದೊಂದು ಅದ್ಭುತ ಲೋಕವೇ ಸರಿ ಇಂತಹ ಲೋಕಕ್ಕೆ ತಮ್ಮನ್ನು ತಾವು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿದ್ದಾರೆ. ಅಪಾರ ದೈವಭಕ್ತಿಯನ್ನು ಹೊಂದಿರುವ ಇವರು ಅತ್ಯಂತ ಕಟ್ಟುನಿಟ್ಟಾಗಿ ರೀತಿ-ರಿವಾಜುಗಳಿಗೆ ಚ್ಯುತಿ ಬಾರದಂತೆ ಕ್ರಮಬದ್ಧವಾಗಿ ಕೋಲ ಕಟ್ಟುತ್ತಾ ಬಂದಿದ್ದು ಹೆಚ್ಚಿನ ಫಲಾಪೇಕ್ಷೆಯನ್ನು ಹೊಂದದೆ ಸೇವೆಯನ್ನು ಸಲ್ಲಿಸುತ್ತಿರುವುದರಿಂದ ಜನರಿಗೆ ಇವರ ಬಗ್ಗೆ ಅಗಣ್ಯ ನಂಬಿಕೆ ಮತ್ತು ಗೌರವವಿದೆ.

ಇವರ ದೈವ ನರ್ತನದ ಸೊಗಡಿಗೆ ಮನಸೋತು ವರ್ತೆ ಕಲ್ಕುಡ ತೂಕತ್ತೆರಿ ದೈವಸ್ಥಾನ ಕೈರು ಪೆರ್ಡೂರು ಇಲ್ಲಿ “ತುಳುವ ಮಂದಾರ” ಪ್ರಶಸ್ತಿ , ಎಳ್ಳಾರೆ ಕಲ್ಕುಡ ಕ್ಷೇತ್ರದಲ್ಲಿ, ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರಡಿಯಲ್ಲಿ, ಮಂಚಕಲ್ಲು ಕ್ಷೇತ್ರದಲ್ಲಿ “ಚಿನ್ನದ ಬಳೆ” ತೊಡಿಸಿ ಗೌರವಿಸಿದ್ದಾರೆ. ರಾಜ್ಯ ಹಾಗೂ ಹೊರರಾಜ್ಯಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಇವರು ಕಲ್ಕುಡ, ಪಂಜುರ್ಲಿ, ವರ್ತೆ, ಪಿಲಿಚೌಂಡಿ ನೇಮ ನರ್ತನಗಳಲ್ಲಿ ಹೆಸರುವಾಸಿಯಾಗಿದ್ದಾರೆ

ವಿನಯವಂತರಾದ ಜನಾನುರಾಗಿಯಾದ ಮತ್ತು ರಾಮ ಪಾಣಾರರವರ ಮಗ ಸಂತೋಷ್ ರವರು ಕೂಡ ತಂದೆಯಂತೆ ಶ್ರದ್ಧಾ ಭಕ್ತಿಯಿಂದ ದೈವ ನರ್ತನ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ ಅಲ್ಲದೇ ಉತ್ತಮ ಗಾಯಕರು ಹೌದು.

ಬರಹ-ಸೌಮ್ಯಾರಾಣಿ ವಿಶ್ವನಾಥ್ ಪೆರ್ಡೂರು.

LEAVE A REPLY

Please enter your comment!
Please enter your name here