ಶಿವಪುರ: “ಎಲ್ಲಾ ಜಾತಿ ಸಮುದಾಯಗಳನ್ನು ಸಮಭಾವದಿಂದ ಕಾಣುವುದೇ ನಾರಾಯಣ ಗುರುಗಳ ತತ್ವಸಿದ್ಧಾಂತ” ಎಂದು ಹೆಬ್ರಿ ತಾಲೂಕು ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದರು.
ಅವರು ಶಿವಪುರ ಬಿಲ್ಲವ ಸೇವಾ ಸಂಘದ ವತಿಯಿಂದ ನಡೆದ ಬ್ರಹ್ಮರ್ಷಿ ನಾರಾಯಣ ಗುರುಗಳ 171ನೇ ಜಯಂತಿ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, “ಸಂಘಟನಾತ್ಮಕವಾಗಿ ಎಷ್ಟೇ ಬಲಿಷ್ಠರಾಗಿದ್ದರೂ ಬಿಲ್ಲವರು ಯಾವತ್ತೂ ಜಾತಿವಾದಿಗಳಾಗಲಿಲ್ಲ. ಬದಲಾಗಿ ಸಮಾಜವನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿ ಎಲ್ಲಾ ಜಾತಿ ಜನಾಂಗದ ಪ್ರೀತಿ-ವಿಶ್ವಾಸ ಗಳಿಸಿದ್ದಾರೆ. ಇಂಥ ಸತ್ಯ-ಧರ್ಮದ ನಾಯಕತ್ವದ ಪರಂಪರೆ ಕೋಟಿ ಚೆನ್ನಯರ ಕಾಲದಿಂದಲೂ ಬಿಲ್ಲವರ ರಕ್ತಗತವಾಗಿ ಬಂದಿದೆ” ಎಂದು ಹೇಳಿದರು.
ಕಾರ್ಯಕ್ರಮಕ್ಕೆ ದಿವಾನಂದ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಶ್ವೇತಾ ರಾಘವೇಂದ್ರ, ಶಿಕ್ಷಕ ಹರೀಶ್ ಪೂಜಾರಿ, ಸಂಘದ ಕೋಶಾಧಿಕಾರಿ ರಮೇಶ್ ಕುಮಾರ್, ಗರಡಿ ಪೂಜಾರಿಗಳಾದ ಜಯಕರ ಪೂಜಾರಿ, ನಾಟಿ ವೈದ್ಯ ನಾರಾಯಣ ಪೂಜಾರಿ, ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಪೂಜಾರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಪೂಜಾರಿ ಸ್ವಾಗತಿಸಿದರು. ಸತೀಶ್ ಪೂಜಾರಿ ಧನ್ಯವಾದಗಳನ್ನು ಅರ್ಪಿಸಿದರು. ಪ್ರಮೀಳಾ ಕುಂಟೆಬೆಟ್ಟು, ವಂದನಾ ಮತ್ತು ಪ್ರಮೀಳಾ ಕಾಳಾಯಿ ನಿರೂಪಣೆ ನಡೆಸಿಕೊಟ್ಟರು.

