ತಡರಾತ್ರಿ ಬಸ್ಸಿಲ್ಲದೆ ಪರದಾಟ; ಪ್ರಯಾಣಿಕರ ಪಾಲಿಗೆ ಆಪತ್ಭಾಂಧವರಾದ ಮೂಡುಬಿದಿರೆಯ ಹನೀಫ್ ರಹ್ಮಾನಿಯಾ

0
135

ಮೂಡುಬಿದಿರೆ: ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಕಾಲದಲ್ಲಿ ಪ್ರೀತಿ, ನಂಬಿಕೆ, ಕರುಣೆ ಮತ್ತು ವಿಶ್ವಾಸಕ್ಕೆ ಬೆಲೆ ಇಲ್ಲದಂತಾಗಿದೆ. ಮನುಷ್ಯ ಮಾನವೀಯತೆಯನ್ನು ಮರೆತು ಸ್ವಾರ್ಥ ಜೀವನವನ್ನು ನಡೆಸುತ್ತಿದ್ದಾನೆ. ನನ್ನವರು ತನ್ನವರು ಎನ್ನುವ ಭಾವನೆ ಮಾನವನ ಮನದಲ್ಲಿ ನಶಿಸಿಹೋಗುತ್ತಿರುವುದು ವಿಪರ್ಯಾಸ ಆಗಿದೆ. ಇಂಥ ಪರಿಸ್ಥಿತಿಯಲ್ಲಿ ಮಾನವೀಯತೆಯ ಬೀಜವನ್ನು ಬಿತ್ತಿ ಆಪತ್ಭಾಂಧವರಾದವರು ಮೂಡುಬಿದಿರೆಯ ಹನೀಫ್ ರಹ್ಮಾನಿಯಾ.

ಹನೀಫ್ ರಹ್ಮಾನಿಯ. ಮೂಡುಬಿದಿರೆಯಲ್ಲಿ ಇವರು ಎಲ್ಲರಿಗೂ ಚಿರಪರಿಚಿತ. ಸದಾ ಸಮಾಜಸೇವೆಯಲ್ಲೇ ತೊಡಗಿಸಿಕೊಳ್ಳುತ್ತಿರುವ ಆಪತ್ಭಾಂಧವ. ಮಂಗಳವಾರ ತಡರಾತ್ರಿ ಮೂಡುಬಿದಿರೆ ಕೆಎಸ್‌ ಆರ್‌ ಟಿಸಿ ತಂಗುದಾಣದ ಬಳಿ ದೂರದ ಗದಗದವರಾಗಿರುವ ಇಬ್ಬರು ಮನೆಗೆ ಹೋಗಲು ಬಸ್ಸು ಇಲ್ಲದೆ ಅಸಹಾಯಕರಾಗಿ ನಿಂತಿದ್ದರು. ಅವರಿಬ್ಬರೂ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಅಡುಗೆ ಸಿಬ್ಬಂದಿಗಳು. ಅವರ ಪೈಕಿ ಒಬ್ಬನ ತಾಯಿ ಊರಲ್ಲಿ ಮೃತಪಟ್ಟಿದ್ದು, ಊರಿಗೆ ತುರ್ತಾಗಿ ಹೋಗುವ ಸಲುವಾಗಿ ಮೂಡುಬಿದಿರೆ ಪೇಟೆಗೆ ಬಂದಿದ್ದರು.
ಹನೀಫ್ ಅವರ ಬೆದ್ರ ಕೆಫೆ ಅಲ್ಲೇ ಇರುವುದರಿಂದ ಇವರಿಬ್ಬರ ತಿರುಗಾಟ, ಅಸಹಾಯಕತೆ, ಅವರ ಕಂಗಾಲು ಹನೀಫ್ ಅವರ ಗಮನಕ್ಕೆ ಬರುತ್ತದೆ. ಅಳುತ್ತಿರುವ ಅವರನ್ನು ಹತ್ತಿರಕ್ಕೆ ಕರೆದು ವಿಚಾರಿಸಿದಾಗ ಅವರ ಅಸಹಾಯಕತೆಯನ್ನು ವಿವರಿಸುತ್ತಾರೆ. ಕೂಡಲೇ ಅವರಿಗೆ ಧೈರ್ಯ ತುಂಬುವ ಹನೀಫ್‌ ತಕ್ಷಣ ಕಾರೊಂದನ್ನು ತರಿಸಿ ಅವರನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಸಾಸ್ತಾನದವರೆಗೆ ಅವರನ್ನು ಕಾರಲ್ಲಿ ಕರೆದೊಯ್ದು ಅಲ್ಲಿಂದ ಊರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ವಾಪಾಸು ಬರುವಾಗ ಬೆಳಗ್ಗಿನ ಜಾವ ಮೂರೂವರೆ. ಅಸಹಾಯಕರಿಗೆ ನೆರವಾಗಿ ಮಾನವೀಯ ಸೇವೆ ಮಾಡಿದ ಹನೀಫ್ ಅವರ ಈ ಒಂದು ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹನೀಫ್ ಅವರ ಜೊತೆಗೆ ಹಫೀಝ್ ತೋಡಾರ್, ರಿಝ್ವಾನ್ ತೋಡಾರ್ ಅವರು ಕಾರಿನಲ್ಲಿ ಹೋಗಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here