ಶಿಕ್ಷಣದ ಮುಖಾಂತರ ಮನುಷ್ಯನಲ್ಲಿ ವ್ಯಕ್ತಿತ್ವದ ನಿರ್ಮಾಣವಾಗಬೇಕು – ಫಾದರ್ ಡಾ. ಪ್ರವೀಣ್ ಮಾರ್ಟಿಸ್

0
104

ರಾಮಕೃಷ್ಣ ಮಠದಲ್ಲಿ ಶ್ರದ್ಧಾ – ಶೈಕ್ಷಣಿಕ ವಿಚಾರ ಸಂಕಿರಣ ಸಂಪನ್ನ

“ರಾಮಕೃಷ್ಣ ಮಿಷನ್ ನ ಸೇವೆ ಸದಾ ಶ್ಲಾಘನೀಯ. ಕಳೆದ ೭೫ ವರ್ಷಗಳಿಂದ ಮಂಗಳೂರು ಭಾಗದಲ್ಲಿ ಸೇವಾ ಚಟುವಟಿಕೆ ಮಾಡುತ್ತಿರುವ ಈ ಸಂಸ್ಥೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸ್ವಾಮಿ ವಿವೇಕಾನಂದರು ಕೇವಲ ಶಿಕ್ಷಣವನ್ನು ಶಿಕ್ಷಣವಾಗಿ ನೋಡಲಿಲ್ಲ ಬದಲಾಗಿ ಚಾರಿತ್ರ‍್ಯ ನಿರ್ಮಾಣದ ಪರಿಕಲ್ಪನೆಯನ್ನು ಶಿಕ್ಷಣದ ಮೂಲಕ ನೀಡಿದರು. ಶಿಕ್ಷಣದ ಮುಖಾಂತರ ಮನುಷ್ಯನಲ್ಲಿ ವ್ಯಕ್ತಿತ್ವದ ನಿರ್ಮಾಣವಾಗಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದರು. ಮಂಗಳೂರು ರಾಮಕೃಷ್ಣ ಮಿಷನ್ ಶೈಕ್ಷಣಿಕ ಚಟುವಟಿಕೆಗಳಾಗಲಿ ಅಥವಾ ಸ್ವಚ್ಛ ಭಾರತದಂತಹ ಸಮಾಜಮುಖಿ ಚಟುವಟಿಕೆಗಳಲ್ಲಾಗಲಿ ಸಮಾಜಕ್ಕೆ ಮಾದರಿಯಾಗಿದೆ. ಬದಲಾವಣೆ ಅನ್ನುವುದು ಪ್ರಜ್ಞಾವಂತ ನಾಗರಿಕರಾದ ನಮ್ಮ ಮನಸ್ಸಿನಿಂದ ಬರಬೇಕು ಆಗ ಮಾತ್ರ ಶಿಕ್ಷಣಕ್ಕೆ ನಿಜವಾದ ಅರ್ಥ ಬರುವುದು. ಇಂದಿನ ಈ ಕಾರ್ಯಕ್ರಮ ನಮ್ಮ ಮನಃಪರಿವರ್ತನೆಗೆ ಹಾದಿಯಾಗಲಿ ಮತ್ತು ವಿದ್ಯಾರ್ಥಿಗಳಾಗಿ ಈ ನಿಟ್ಟಿನಲ್ಲಿ ಪ್ರಯತ್ನಿಸೋಣ” ಎಂದು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದ ಕುಲಪತಿಗಳಾದ ಫಾದರ್ ಡಾ. ಪ್ರವೀಣ್ ಮಾರ್ಟಿಸ್ ಹೇಳಿದರು.
ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ನಡೆದ ಶ್ರದ್ಧಾ ೨೦೨೫ – ಸ್ನಾತಕೋತ್ತರ ವಿದ್ಯಾರ್ಥಿಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರಿನ ರಾಮಕೃಷ್ಣ ಮಿಷನ್ ಅಮೃತ ಮಹೋತ್ಸವದ ಪ್ರಯುಕ್ತ ನಾಲ್ಕು ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ಶೈಕ್ಷಣಿಕ ವಿಚಾರ ಸಂಕಿರಣ, ೧೮೯೩ ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥ “ಸೇವೆ – ನಿಜವಾದ ಶಿಕ್ಷಣದ ಸ್ಫೂರ್ತಿ” ಎಂಬ ಪರಿಕಲ್ಪನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ರವಿಚಂದ್ರ ನಾಯಕ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಮಾರಂಭದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು. ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (ಖIಒSಇ) ಇದರ ಸಂಚಾಲಕರಾದ ಪೂಜ್ಯ ಸ್ವಾಮಿ ಮಹಾಮೇಧಾನಂದಜಿಯವರು ಮೊದಲ ಅವಧಿಯನ್ನು ನಡೆಸಿಕೊಟ್ಟರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಮನಸ್ ತರಬೇತಿ ಕೇಂದ್ರದ ನಿರ್ದೇಶಕರಾದ ಪ್ರೊ. ಕೆ. ರಘೋತ್ತಮ ರಾವ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ನಂತರ “ಸೇವೆ, ಕೌಶಲ್ಯ, ಮೌಲ್ಯಗಳು ಮತ್ತು ಭವಿಷ್ಯದ ದೃಷ್ಟಿಕೋನದಿಂದ ಪದವಿಗಳನ್ನು ಮೀರಿದ ಶಿಕ್ಷಣ”” ಎಂಬ ವಿಷಯದ ಕುರಿತಾಗಿ ನಡೆದ ಸಂವಾದದಲ್ಲಿ ಪೂಜ್ಯ ಸ್ವಾಮಿ ಮಹಾಮೇಧಾನಂದಜಿ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಶಾಲಿನಿ ಅಯ್ಯಪ್ಪಮತ್ತು ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಯತೀಶ ಕೆ. ಎಸ್. ಭಾಗವಹಿಸಿದರು. ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪ್ಪಾಡಿ ಸಂವಾದಕಾರ್ಯಕ್ರಮ ನಿರ್ವಹಿಸಿದರು.ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಮಂಗಳ ರಿಸೋರ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಿರ್ದೇಶಕರಾದ ಸಚಿನ್ ಶೆಟ್ಟಿ ನಲ್ಲೂರು ವಂದಿಸಿದರು. ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದಿಂದ ೧೦ ಕಾಲೇಜುಗಳ ಸುಮಾರು ೫೮೦ ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.

ಎರಡನೇ ದಿನದ ವಿಚಾರ ಸಂಕಿರಣ ಮೇಧಾ – ೨೦೨೫ ಶಿಕ್ಷಕರಿಗೆ ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ ೧೨ ಸೆಪ್ಟೆಂಬರ್ ೨೦೨೫ ರಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ

LEAVE A REPLY

Please enter your comment!
Please enter your name here