ಉಡುಪಿ: ನೇಪಾಳ ದಂಗೆಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ಮೋದಿಯವರ ಅಣಕುಚಿತ್ರದೊಂದಿಗೆ ಬಿಜೆಪಿ ಧ್ವಜವನ್ನು ಬಳಸಿ ಪ್ರಚೋದನಾತ್ಮಕ ಸಂದೇಶ ಹಾಕಿರುವ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಂಚಾಲಕ ರೋಶನ್ ಶೆಟ್ಟಿ ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಗಳಲ್ಲಿ ಭಾರತದ ಸಾರ್ವಭೌಮತೆ ಮತ್ತು ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಹ ಸಂದೇಶಗಳನ್ನು ಪಸರಿಸಿ ಸಮಾಜದ ಶಾಂತಿ ಕದಡುವ ಪ್ರಯತ್ನದ ನಡೆಸಲಾಗುತ್ತಿದೆ. ಶ್ರೀಲಂಕ ಹಾಗೂ ಬಾಂಗ್ಲಾದೇಶ, ನೇಪಾಳದಲ್ಲಿ ಸರ್ಕಾರದ ವಿರುದ್ಧ ಜನ ನಾಗರೀಕ ದಂಗೆ ಎದ್ದಿರುವ ಘಟನೆ ಉದಾಹರಣೆ ನೀಡಿ ಮುಂದಿನ ಸರದಿ ಭಾರತದ್ದಾಗಿದೆ ಎಂಬುದಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ರೋಶನ್ ಶೆಟ್ಟಿ ಪ್ರಚೋದನಾತ್ಮಕ ಸಂದೇಶ ಹರಡಿದ್ದಾರೆ. ಇದು ಕಾಂಗ್ರೆಸ್ ಮನಸ್ಥಿತಿ ಬಿಂಬಿಸುತ್ತದೆ. ಈಗಾಗಲೇ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಯುವಮೋರ್ಚಾ ರಸ್ತೆಗಿಳಿದು ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ವಿಖ್ಯಾತ ಶೆಟ್ಟಿ ಮಾತನಾಡಿ, ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಯಾರೇ ಅಧಿಕಾರದಲ್ಲಿದ್ದರೂ ಜನ ಒಪ್ಪಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಮೋದಿಯವರನ್ನು ವಿರೋಧಿಸುತ್ತಾ ದೇಶಕ್ಕೂ ಹಾನಿಯಾಗಲಿ ಎಂಬ ಭಾವನೆ ಬೆಳೆಸಿಕೊಂಡಿರುವುದು ಆಶ್ವರ್ಯಕರ. ಬಿಜೆಪಿ ಮತ್ತು ಹಿಂದೂಪರ ಸಂಟನೆಗಳ ವಿರುದ್ಧ ಸುಮೋಟೋ ಕೇಸ್ ದಾಖಲಿಸುವ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಪ್ರಚೋದನಾತ್ಮಕ ಬರಹಗಳ ಬಗ್ಗೆಯೂ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಯುವಮೋರ್ಚಾ ಮುಖಂಡರಾದ ಅಭಿರಾಜ್ ಸುವರ್ಣ, ಶ್ರೀವತ್ಸ, ನಿತಿನ್ ಪೈ ಉಪಸ್ಥಿತರಿದ್ದರು.