ನವದೆಹಲಿ: ದೆಹಲಿಯವರು ದೇಶದ ಗಣ್ಯ ನಾಗರಿಕರು ಎಂಬ ಕಾರಣಕ್ಕೆ ಮಾಲಿನ್ಯವನ್ನು ನಿಗ್ರಹಿಸುವ ನೀತಿ ಕೇವಲ ದೆಹಲಿಯಲ್ಲಿ ಮಾತ್ರ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮಾರಾಟ, ಸಂಗ್ರಹಣೆ, ಸಾಗಣೆ ಮತ್ತು ತಯಾರಿಕೆಯನ್ನು ನಿಷೇಧಿಸಿದ ಏಪ್ರಿಲ್ 3 ರ ಆದೇಶದ ವಿರುದ್ಧದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ವಿಷಯ ತಿಳಿಸಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಪಟಾಕಿಗಳ ಸಂಪೂರ್ಣ ನಿಷೇಧದ ವಿರುದ್ಧದ ಅರ್ಜಿಯ ಕುರಿತು ಸಿಎಕ್ಯೂಎಂಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ಉತ್ತರ ನೀಡುವಂತೆ ಕೋರಿದೆ.
ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, ಎನ್‌ಸಿಆರ್ ನಗರಗಳಿಗೆ ಶುದ್ಧ ಗಾಳಿಯನ್ನು ಪಡೆಯುವ ಹಕ್ಕಿದ್ದರೆ, ಇತರ ನಗರಗಳ ಜನರಿಗೆ ಏಕೆ ಅವಕಾಶವಿಲ್ಲ ಎಂದು ಕೇಳಿದರು. ‘ಯಾವುದೇ ನೀತಿ ಇದ್ದರೂ, ಅದು ಪ್ಯಾನ್-ಇಂಡಿಯಾ ಮಟ್ಟದಲ್ಲಿರಬೇಕು. ದೆಹಲಿಯು ದೇಶದ ಗಣ್ಯ ವರ್ಗ ಎಂಬ ಕಾರಣಕ್ಕಾಗಿ ನಾವು ಅವರಿಗೆ ಮಾತ್ರ ನೀತಿಯನ್ನು ರೂಪಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.