ನಿಜವಾದ ಶಿಕ್ಷಕನಾದಾಗ ಆತ ಸಮಾಜದ ನಿಜವಾದ ನಾಯಕನಾಗುತ್ತಾನೆ – ಸ್ವಾಮಿ ಮುಕ್ತಿದಾನಂದಜಿ

0
20

“ಪ್ರತಿಯೊಬ್ಬ ಶಿಕ್ಷಕ ಅಥವಾ ಶಿಕ್ಷಣಾರ್ಥಿ ಮೇಧಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಮನುಷ್ಯನಲ್ಲಿರುವ ಪೂರ್ಣತೆಯನ್ನು ಹೊರತರಲು ಕರೆ ನೀಡಿದರು ಮತ್ತು ತನ್ನ ಜೀವನದ ಉದ್ದೇಶವೇ ಮನುಷ್ಯನ ಅಂತರಾಳದಲ್ಲಿರುವ ಪರಿಪೂರ್ಣತೆಯನ್ನು ಹೊರತರುವುದೆಂದು ಹೇಳಿದರು. ಶಿಕ್ಷಣವು ನಮ್ಮನ್ನು ನಾವು ಅರಿತುಕೊಳ್ಳಲು ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕ ತನ್ನ ವಿಷಯವಷ್ಟೇ ಅಲ್ಲದೆ, ಉನ್ನತವಾದ ಹಾಗೂ ವಿದ್ಯಾರ್ಥಿಗಳ ಜೀವನಕ್ಕೆ ಪೂರಕವಾದ ವಿಷಯಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಬೇಕು. ನಿಜವಾದ ಶಿಕ್ಷಕನಾದಾಗ ಆತ ಸಮಾಜದ ನಿಜವಾದ ನಾಯಕನಾಗುತ್ತಾನೆ. ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಪರಿಪೂರ್ಣತೆಯನ್ನು ಹೊರತರುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಯಲ್ಲಿ ಜ್ಞಾನದ ದಾಹವನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕು ಜೊತೆಗೆ ಸಮಾಜದ ಸೇವೆ ಮಾಡುವ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕೆಲಸವಾಗಬೇಕು” ಎಂದು ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರು ಹಾಗೂ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್, ಬೇಲೂರು ಮಠ ಇದರ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ ಹೇಳಿದರು.
ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ನಡೆದ ಮೇಧಾ – ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎರಡನೇ ದಿನದ ಶೈಕ್ಷಣಿಕ ವಿಚಾರ ಸಂಕಿರಣ, 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥ “ಸೇವೆ – ನಿಜವಾದ ಶಿಕ್ಷಣದ ಸ್ಫೂರ್ತಿ” ಎಂಬ ಪರಿಕಲ್ಪನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಸುಳ್ಯದ ಕೆ. ವಿ. ಜಿ. ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅಕ್ಷಯ್ ಕೆ. ಸಿ. ಭಾಗವಹಿಸಿದರು ಈ ಸಮಾರಂಭದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ ರಾಮಕೃಷ್ಣ ಮಠ ಮತ್ತು ಮಿಷನ್ ಕಳೆದ 75 ವರ್ಷಗಳಿಂದ ಮಂಗಳೂರು ಭಾಗದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದೆ. ಈ ಸಂದರ್ಭದಲ್ಲಿ ಮಂಗಳೂರಿನ ಜನರ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಅಮೃತವರ್ಷದ ಸಂದರ್ಭದಲ್ಲಿ ರಾಮಕೃಷ್ಣ ಮಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿಯಾಗುತ್ತಿದೆ. ನಮ್ಮ ಜೀವನಕ್ಕೆ ಸರಿಯಾದ ದಾರಿ ಸರಿಯಾದ ದೃಷ್ಟಿಕೋನವನ್ನು ಇಂತಹ ಕಾರ್ಯಕ್ರಮಗಳು ನೀಡಲಿ. ಭವಿಷ್ಯದ ಭಾರತ ನಿರ್ಮಾಣದ ಜವಾಬ್ದಾರಿ ಶಿಕ್ಷಕ ಸಮೂಹದ್ದಾಗಿದೆ. ಈ ಕಾರ್ಯಕ್ರಮ ಭವಿಷ್ಯ ಭಾರತದ ನಿರ್ಮಾಣಕ್ಕೆ ಸಹಕಾರಿಯಾಗಲಿ” ಎಂದು ಹೇಳಿದರು.
ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು. ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (ಖIಒSಇ) ಇದರ ಸಂಚಾಲಕರಾದ ಪೂಜ್ಯ ಸ್ವಾಮಿ ಮಹಾಮೇಧಾನಂದಜಿಯವರು ಮೊದಲ ಅವಧಿಯನ್ನು ನಡೆಸಿಕೊಟ್ಟರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಮನಸ್ ತರಬೇತಿ ಕೇಂದ್ರದ ನಿರ್ದೇಶಕರಾದ ಪ್ರೊ. ಕೆ. ರಘೋತ್ತಮ ರಾವ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ನಂತರ “ಬೋಧನೆಯಾಗಿ ಸೇವೆ – ಪಠ್ಯಕ್ರಮವನ್ನು ಮೀರಿ ಹೃದಯ ಮತ್ತು ಮನಸ್ಸುಗಳನ್ನು ಪೋಷಿಸುವುದು” ಎಂಬ ವಿಷಯದ ಕುರಿತಾಗಿ ನಡೆದ ಸಂವಾದದಲ್ಲಿ ಮಂಗಳೂರಿನ ಡಾ. ತುಂಗಾಸ್ ಮನಸ್ವಿನಿ ಆಸ್ಪತ್ರೆಯ ಸ್ಥಾಪಕರಾದ ಡಾ. ರವೀಶ್ ತುಂಗ, ಸುಳ್ಯದ ಶಿಕ್ಷಣತಜ್ಞರು ಹಾಗೂ ಅಂಕಣಕಾರರಾದ ಡಾ. ಚಂದ್ರಶೇಖರ ದಾಮ್ಲೆ ಮತ್ತು ಕುಂದಾಪುರದ ವಿ.ಕೆ.ಆರ್ ಆಚಾರ್ಯ ಸ್ಮಾರಕ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಚಿಂತನಾ ರಾಜೇಶ್ ಭಾಗವಹಿಸಿದರು. ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪ್ಪಾಡಿ ಸಂವಾದ ಕಾರ್ಯಕ್ರಮ ನಿರ್ವಹಿಸಿದರು. ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ನೀರ್ಚಾಲು ವಂದಿಸಿದರು. ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದಿಂದ 10 ಶಾಲಾ ಕಾಲೇಜುಗಳ ಸುಮಾರು 600 ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.

ಮೂರನೆ ದಿನದ ವಿಚಾರ ಸಂಕಿರಣ ಪ್ರಜ್ಞಾ – 2025 ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ 13 ಸೆಪ್ಟೆಂಬರ್ 2025 ರಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ

LEAVE A REPLY

Please enter your comment!
Please enter your name here