“ಕಾಂತರ” ಖ್ಯಾತಿಯ ಅಭಿಜಾತ ಕಲಾವಿದ ಸತೀಶ್ ಆಚಾರ್ಯ ಪೆರ್ಡೂರು ಉಡುಪಿ ತುಳುವ ಮಹಾಸಭಾದ ಭೇಟಿ

0
30

ರಂಗಭೂಮಿಯ ಪ್ರಬುದ್ಧ ನಟ, ಅಭಿಜಾತ ಕಲಾವಿದರಾದ ಸತೀಶ್ ಆಚಾರ್ಯ ಪೆರ್ಡೂರು ಇವರನ್ನು ದಿನಾಂಕ 11/09/2025 ರಂದು ಉಡುಪಿ ತಾಲೂಕು ತುಳುವ ಮಹಾಸಭಾದ ಪ್ರಧಾನ ಸಂಚಾಲಕರು ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು, ಸಂಘಟಕರಾದ ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು, ಪ್ರಶಾಂತ್ ಹಿರಿಯಡ್ಕ, ಶಶಿಕಲಾ ವಿನೋದ ಪೆರ್ಡೂರು ಇವರು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಭೇಟಿಯನ್ನಿತ್ತರು.

ಇಂದಿನ ಯುವ ಜನತೆಗೆ ಪಠ್ಯ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳ ಸಮ್ಮಿಲಿತವು ಆರೋಗ್ಯಯುತ ಜೀವನದ ನಾಡಿ. ತುಳುನಾಡಿನ ಉದಯೋನ್ಮುಖ ಪ್ರತಿಭೆಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಕಾರ್ಯ ಅತ್ಯಗತ್ಯ ಈ ನಿಟ್ಟಿನಲ್ಲಿ ಉಡುಪಿ ತುಳುವ ಮಹಾಸಭಾದ ಸಂಘಟನಾಶೀಲತೆಯು ನನಗೆ ತುಂಬಾ ಮೆಚ್ಚುಗೆಯಾಯಿತು, ಅಲ್ಲದೇ ನಿಮ್ಮ ಮುಂದಿನ ನಡೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಸತೀಶ್ ಆಚಾರ್ಯರ ಬದುಕು-ರಂಗಭೂಮಿ -ಚಲನಚಿತ್ರ

ಪದ್ಮನಾಭ ಆಚಾರ್ಯ ಮತ್ತು ಭವಾನಿ ದಂಪತಿಗಳ ತುಂಬ ಸಂಸಾರದಲ್ಲಿ ಕಿರಿಯ ಪುತ್ರರಾಗಿ 11/09/1970 ರಲ್ಲಿ ಜನಿಸಿದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಾದ ಪೆರ್ಡೂರಿನಲ್ಲಿಯೇ ಪಡೆದ ಇವರು “ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು” ಎಂಬಂತೆ ವಿದ್ಯಾಭ್ಯಾಸದ ಅವಧಿಯಲ್ಲಿಯೇ ನಾಟಕ,ಚೆಂಡೆವಾದನ, ಕರಾವಳಿಯ ಗಂಡುಕಲೆಯಾದ ಯಕ್ಷಗಾನದಲ್ಲಿಯೂ ವಿಶೇಷವಾದ ಆಸಕ್ತಿ ಅಭಿರುಚಿಯನ್ನು ಹೊಂದಿರುತ್ತಾರೆ.

ಕಳೆದ 43 ವರ್ಷಗಳಿಂದ ಅವಿರತವಾಗಿ ರಂಗಭೂಮಿಯಲ್ಲಿ ಶ್ರಮಿಸುತ್ತಿರುವ ಇವರು 200ಕ್ಕೂ ಅಧಿಕ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿದ್ದಲ್ಲದೇ ಸರಿಸುಮಾರು 40ಕ್ಕೂ ಮಿಕ್ಕಿ ನಾಟಕಗಳನ್ನು ನಿರ್ದೇಶಿಸಿದ ಕೀರ್ತಿ ಇವರಿಗಿದೆ. ಕಲಾ ಸರಸ್ವತಿಯ ಆರಾಧಕರಾದ ಇವರ ನಟನಾ ಪ್ರಭುದ್ಧತೆಗೆ ಕನ್ನಡ ಚಲನಚಿತ್ರಗಳ ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ “ರಾಷ್ಟ್ರ ಪ್ರಶಸ್ತಿ” ವಿಜೇತ ಚಿತ್ರ “ಗುಲಾಬಿ ಟಾಕೀಸ್” ನಲ್ಲಿ ಅಭಿನಯಿಸುವ ಮೂಲಕ ರಜತ ಪರದೆಗೆ ಲಗ್ಗೆ ಇಟ್ಟ ಇವರು ಮುಂದೆ ರೈಲ್ವೆ ಚಿಲ್ಡ್ರೆನ್, ಮನಸ್ಮಿತಾ, ಅಲೆಗಳು, ಗೊತ್ತನಗ ಪೊರ್ತಾಂಡ್ ಹೀಗೆ ಹಲವಾರು ಚಲನಚಿತ್ರಗಳಲ್ಲಿ, ಪಂಚಭಾಷಾ ನಟ ಪ್ರಕಾಶ್ ರೈ ಅವರ “ಏಕಂ” ವೆಬ್ ಸೀರೀಸ್ ನಲ್ಲಿ, ಟಿವಿ ಧಾರವಾಹಿಗಳಾದ ಭೂಮಿಗೆ ಬಂದ ಭಗವಂತ, ಕುದ್ರುವಿನಲ್ಲಿ ನಟಿಸಿದ್ದಾರೆ.

ರಂಗಭೂಮಿಯ ಮುತ್ಸದ್ಧಿ ಪ್ರಭಾಕರ್ ಕಲ್ಯಾಣಿಯವರ ನೇತೃತ್ವದ “ಕೂಡ್ದಿ ಕಲಾವಿದೆರ್” ನಾಟಕ ತಂಡದ ಮೂಲಕ 11ನೇ ವಯಸ್ಸಿಗೆ ರಂಗಭೂಮಿ ಪ್ರವೇಶಿಸಿದ ಸತೀಶ್ ರವರು ತಮ್ಮ ಮನೋಜ್ಞ ಅಭಿನಯ ಕೌಶಲ್ಯದಿಂದ ಹಲವಾರು ಸ್ಪರ್ಧಾ ನಾಟಕಗಳಲ್ಲಿ ಅಭಿನಯಿಸಿ ಪ್ರಬುದ್ಧ ರಂಗಕರ್ಮಿಯಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿಯೂ ನಡೆಸಲ್ಪಡುವ ಸ್ಪರ್ಧಾ ನಾಟಕಗಳಲ್ಲಿ ಹಾಗೂ ರಂಗಶ್ರೀ ಕಲಾ ಸಂಸ್ಥೆಯವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿದ ಸರಣಿ ನಾಟಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ನಾಯಕ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಹಾಸ್ಯ ನಟ, ಕರುನಾಡ ನಿಧಿ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಂಗಭೂಮಿಯ ಪ್ರಭುದ್ಧ ನಟನೆಯೊಂದಿಗೆ, ಅನೇಕ ಶಾಲಾ ಮಕ್ಕಳು ಹಾಗೂ ಸಂಘ- ಸಂಸ್ಥೆಗಳು ನಡೆಸುವ ನಾಟಕ ಪ್ರದರ್ಶನಗಳಿಗೆ ನಿರ್ದೇಶನವನ್ನು ಮಾಡುವುದರೊಂದಿಗೆ ರಂಗಭೂಮಿಯಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ್ದಾರೆ. ಸಾಧನೆಯ ಫಲವೆಂಬಂತೆ ಜಗದ್ವಿಖ್ಯಾತಿ ಪಡೆದ ಕನ್ನಡ ಚಲನಚಿತ್ರಗಳ ಮೈಲಿಗಲ್ಲಾದ “ಕಾಂತಾರ” ದಲ್ಲಿ ಕಥಾನಾಯಕಿಯ ತಂದೆಯ ಪಾತ್ರದಲ್ಲಿ ಹಾಗೂ ಮುಂದಿನ ದಿನಗಳಲ್ಲಿ ತೆರೆಕಾಣಲು ಸನ್ನದ್ಧವಾಗಿರುವ ಕಾಂತಾರ-1 ರಲ್ಲಿಯೂ ಅಭಿನಯಿಸುವ ಮೂಲಕ ಪೆರ್ಡೂರಿನ ಹೆಮ್ಮೆಯ ಕಲಾವಿದನಾಗಿದ್ದಾರೆ.

ನಟನೆ ನಿರ್ದೇಶನಗಳಿಗಷ್ಟೇ ಸೀಮಿತವಾಗಿರದೆ, ಯಕ್ಷ ಕಲಾವಿದ, ಚೆಂಡೆ ವಾದಕ, ಭಾಗವತಿಕೆಯನ್ನು ನಡೆಸುವುದರೊಂದಿಗೆ ಗಡಿನಾಡಿನ ಕವಿ ಕಯ್ಯಾರ ಕಿಂಞ್ಞಣ್ಣ ರೈ ಸಮ್ಮುಖದಲ್ಲಿ ಹರಿಕಥೆ, ರೇಡಿಯೋ ಕಾರ್ಯಕ್ರಮಗಳನ್ನು ನೀಡುವುದು ಮಾತ್ರವಲ್ಲದೆ ಕಳೆದ 35-40 ವರ್ಷಗಳಿಂದ ಪೆರ್ಡೂರಿನ ಯುವಕ ಸಂಘ ನಡೆಸಲ್ಪಡುವ ಸಾರ್ವಜನಿಕ ಗಣೇಶೋತ್ಸವದ ಗಣಪತಿ ವಿಗ್ರಹವನ್ನು ಕಲಾತ್ಮಕವಾಗಿ ನಿರ್ಮಿಸಿದ ಹೆಗ್ಗಳಿಕೆ ಇವರದು.

ಕಲಾ ಕ್ಷೇತ್ರದ ಬಹುಮುಖ ಪ್ರತಿಭೆಯಾಗಿರುವ ಇವರ ರಂಗ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತಿರುವ ಮಡದಿ ಶ್ರೀಮತಿ ಸುಜಯ ಹಾಗೂ ಸುಪುತ್ರ ಹರ್ಷಿತರೊಂದಿಗಿನ ಸಂತೃಪ್ತ ಸುಖೀ ಸಂಸಾರದ ಸಾರಥಿಯಾಗಿರುವ ಇವರು ಮುಂದೆಯೂ ಬೆಳ್ಳಿ ಪರದೆಯಲ್ಲಿ ಹೊಸತನದ ಪಾತ್ರದೊಂದಿಗೆ ಅಭಿನಯಿಸುವುದರ ಮುಖೇನ ಪೆರ್ಡೂರಿನ ಕೀರ್ತಿಯನ್ನು ನಭದೆತ್ತರಕ್ಕೆ ಹಾರಿಸಲಿ ಕಲಾವಿದರ ಬಾಳು ಹಸನಾಗಿರಲಿ ಎಂಬ ಆಶಯ.

ಬರಹ- ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು

LEAVE A REPLY

Please enter your comment!
Please enter your name here