ಉಡುಪಿ ; ಭಾರತದ ಜ್ಞಾನ ದೃಢವಾದ ಪರಂಪರೆ ಹೊಂದಿದೆ. ಜಗತ್ತಿನಲ್ಲಿ ಭಾರತೀಯ ಜ್ಞಾನಕ್ಕೆ ಸದೃಶವಾಗಿರುವುದು ಬೇರೆ ಇಲ್ಲ. ಬೇರೆ ದೇಶಗಳಿಗೆ ಶತಮಾನಗಳ ಇತಿಹಾಸವಿದ್ದರೆ ಭಾರತ ಸಾವಿರಾರು ವರ್ಷಗಳ ನಾಗರಿಕತೆ ಹೊಂದಿದೆ. ಇಷ್ಟು ಪ್ರಾಚಿನ, ಪಕ್ವವಾದ ಸಮೃದ್ಧ ಜ್ಞಾನ ಪರಂಪರೆ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತಿರ್ಥಶ್ರೀಪಾದರು ತಿಳಿಸಿದ್ದಾರೆ.
ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ವಿಭಾಗ ಮತ್ತು ಕರ್ನಾಟಕ ಸಂಸತ ವಿಶ್ವವಿದ್ಯಾಲಯ ಮತ್ತು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಜ್ಞಾನ ಮಂಡಲೋತ್ಸವ ನಿಮಿತ್ತ ರಾಜಾಂಗಣದಲ್ಲಿ ನಡೆದ ಭಾರತೀಯ ಜ್ಞಾನ ಪರಂಪರೆಯ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಪಾಶ್ಚಾತ್ಯರಲ್ಲಿ ಭೌತಿಕ ವಿಚಾರಕ್ಕೆ ಪ್ರಾಶಸವಿದೆ. ಇದರಿಂದ ಜೀವನ ಅಪರಿಪೂರ್ಣವಾಗಿದೆ. ಐಹಿಕ ಕಾಮನೆಗಳಿಗೆ ಮಾತ್ರ ಆದ್ಯತೆ. ಆದರೆ ಭಾರತೀಯದಲ್ಲಿ ಆಧ್ಯಾತ್ಮಮಿಳಿತವಾದ ಜ್ಞಾನ ಪರಂಪರೆ ಬೆಳೆದು ಬಂದಿದೆ. ನಮ್ಮತನವನ್ನು ಬೆಳೆಸುವುದರಿಂದ ಮಾತ್ರ ನಿಜವಾದ ವಿಕಾಸ ಸಾಧ್ಯವಿದೆ ಎಂದರು.
ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪುತ್ತಿಗೆ ಮಠದ ಆಸ್ಥಾನ ವಿದ್ವಾಂಸ, ಅಮೇರಿಕಾದ ನಿವಾಸಿ ಕೇಶವ್ ರಾವ್ ತಾಡಿಪತ್ರಿ ಸಮ್ಮೇಳನಾಧ್ಯಕ್ಷರಾಗಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್. ಮೂಡಿತ್ತಾಯ, ಡಿಆರ್ಡಿಒ ವಿಜ್ಞಾನಿ ಪದ್ಮಶ್ರೀ ಡಾ. ಪ್ರಹ್ಲಾದ್ ರಾಮ್ ರಾವ್, ಹಿರಿಯ ಸಂಶೋಧಕ ವಿದ್ವಾಂಸ ಪ್ರೊ. ಶ್ರೀಪತಿ ತಂತ್ರಿ, ಪ್ರಸಿದ್ಧ ವಿದ್ವಾಂಸ ಗೋಪೀನಾಥಾಚಾರ್ ಗಲಗಲಿ, ಸಂಶೋಧಕ ಡಾ.ಸುದರ್ಶನ್ ಮೂರ್ತಿ, ಸಂಶೋಧಕಿ ಡಾ.ಲಕ್ಷಿ$್ಮ ಮೂರ್ತಿ, ಡಾ. ಗುರುಪ್ರಸಾದ್, ತನ್ಮಯಗೋ ಸ್ವಾಮಿ, ಪುತ್ತಿಗೆ ಮಠದ ದಿವಾನ್ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಎಂ. ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ ನಿರ್ದೇಶಕ ಡಾ.ಸುಧೀರ್ ರಾಜ್ ಕೆ. ಸ್ವಾಗತಿಸಿ, ಡಾ. ಷಣ್ಮುಖ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನದಲ್ಲಿ ದೇಶ-&ವಿದೇಶಗಳಿಂದ 50ಕ್ಕೂ ಹೆಚ್ಚಿನ ಪ್ರಬಂಧಗಳು ಮಂಡನೆಯಾಗಿವೆ. ಆನ್ ಲೈನ್ ಮೂಲಕ 50ಕ್ಕೂ ಹೆಚ್ಚಿನ ವಿದ್ವಾಂಸರು ಪ್ರಬಂಧವನ್ನು ಮಂಡಿಸಿದರು.