ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಆಟೋಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಆಟೋದಲ್ಲಿ ಯೇಸು ಮತ್ತು ಜೆನಿಫರ್ ಹಾಗೂ ಚಾಲಕ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಆಟೋ ಚಾಲಕನ ಹೆಸರು ತಿಳಿದು ಬಂದಿಲ್ಲ . ಕಂಟೇನರ್ ಲಾರಿ ಮೊದಲು ಆಟೋಗೆ ಡಿಕ್ಕಿಯಾಗಿದೆ. ನಂತರ ಚಾಲಕನ ನಿಯಂತ್ರಣ ಕಳೆದುಕೊಂಡ ಕಂಟೇನರ್ ಲಾರಿ, ಆಟೋ ಸಮೇತ ನಿರ್ಮಾಣ ಹಂತದ ಕಟ್ಟಡಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಭೀಕರ ಅಪಘಾತಕ್ಕೆ ಕಾರಣ ಏನು?
ಕಂಟೈನರ್ ಲಾರಿ ಸ್ಟೇರಿಂಗ್ ಕಟ್ ಆಗಿದ್ದರಿಂದ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕಂಟೇನರ್ಲಾ ರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಂಟೈನರ್ ಲಾರಿ ಕಾಮಾಕ್ಷಿಪಾಳ್ಯ ಇಂಡಸ್ಟ್ರಿಯಲ್ ಏರಿಯಾ ಕಡೆಯಿಂದ ಬರುತ್ತಿತ್ತು. ಭೀಕರ ಅಪಘಾತದಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿದೆ.
ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದ ತೀವ್ರತೆಗೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತದೇಹಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ವಾಹನಗಳನ್ನು ತೆರವುಗೊಳಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.