ಪುತ್ತೂರು: ಕಡಿಮೆ ವೆಚ್ಚದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಉದ್ದೇಶದಿಂದ ರಾಜ್ಯದ ನಾನಾ ಭಾಗಗಳಲ್ಲಿ ಆರಂಭಗೊಂಡಿದ್ದ ಹತ್ತು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ತಾತ್ಕಾಲಿಕ ಬಂದ್ ಆಗಿವೆ. ಇದರಂತೆ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಕೇಂದ್ರವೂ 6 ತಿಂಗಳಿನಿಂದ ಮುಚ್ಚಿದೆ. ಕೇಂದ್ರದ ಬಾಗಿಲಿನಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂಬ ನೋಟೀಸು ಅಂಟಿಸಲಾಗಿದೆ.
ಏನಿದು ಯೋಗ ಚಿಕಿತ್ಸಾ ಕೇಂದ್ರ?: ಕರ್ನಾಟಕ ಸರಕಾರ ಆಯುಷ್ ನಿರ್ದೇಶನಾಲಯ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮತ್ತು ಶಾಂತಿವನ ಟ್ರಸ್ಟ್ ಸಹಯೋಗದಲ್ಲಿ 2010ರಲ್ಲಿ ರಾಜ್ಯದ ಆಯ್ದ 10 ತಾಲೂಕು ಆಸ್ಪತ್ರೆಗಳಲ್ಲಿ ಸರಕಾರಿ ಯೋಗ ಮತ್ತು ಪೃಕೃತಿ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿತ್ತು. ಅದರಲ್ಲಿ ಪುತ್ತೂರಿನದ್ದೂ ಒಂದು. ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ನೈಸರ್ಗಿಕ ಚಿಕಿತ್ಸಾ ಪದ್ಧತಿ (ನ್ಯಾಚುರೋಪತಿ)ಯನ್ನು ಹೊಂದಿರುವ ಈ ಚಿಕಿತ್ಸಾ ಕೇಂದ್ರದಲ್ಲಿ ಹಲವಾರು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಯೋಗದ ಮೂಲಕ ಆಧ್ಯಾತ್ಮಿಕ ಆರೋಗ್ಯವನ್ನೂ ಒದಗಿಸುವ ಕೆಲಸ ಈ ಕೇಂದ್ರದಿಂದ ನಡೆಯುತ್ತಿತ್ತು.
ಅನುದಾನದ ಕೊರತೆ?: ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಕರ್ನಾಟಕ ರಾಜ್ಯ ಸರಕಾರ ಈ ಕೇಂದ್ರದ ನಿರ್ವಹಣೆಗಾಗಿ ಶಾಂತಿವನ ಟ್ರಸ್ಟ್ ಗೆ ಗುತ್ತಿಗೆ ನೀಡಿದ್ದು, ಕೇಂದ್ರದ ಸಿಬಂದಿಗಳ ಸಂಬಳ ವೆಚ್ಚವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅನುದಾನದಲ್ಲಿ ಮತ್ತು ಉಪಕರಣಗಳು ಮತ್ತು ಇತರ ಖರ್ಚುಗಳನ್ನು ಕರ್ನಾಟಕ ರಾಜ್ಯ ಸರಕಾರ ಭರಿಸುತ್ತಿತ್ತು. ಆದರೆ ಕೆಲವು ಸಮಯಗಳಿಂದ ಈ ಕೇಂದ್ರದ ನಿರ್ವಹಣೆಗೆ ಅನುದಾನ ಒದಗಿಸದಿರುವ ಹಿನ್ನೆಲೆಯಲ್ಲಿ ಎಲ್ಲ ಕೇಂದ್ರಗಳು ಸ್ಥಗಿತವಾಗಿದೆ.
ಪುತ್ತೂರಿನಲ್ಲಿ ಖಾಸಗಿ ಸಹಭಾಗಿತ್ವ ವಹಿಸಿದ್ದ ಶಾಂತಿವನ ಟ್ರಸ್ಟ್ ಕಳೆದ ಒಂದು ವರ್ಷಗಳ ಕಾಲ ಟ್ರಸ್ಟ್ ವತಿಯಿಂದಲೇ ಕೇಂದ್ರದ ಎಲ್ಲಾ ವೆಚ್ಚಗಳನ್ನು ಭರಿಸಿದ್ದು, ಬಳಿಕವೂ ಅನುದಾನ ಬಾರದಿರುವ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಕೇಂದ್ರ ಮುಚ್ಚಲಾಗಿದೆ. ಪುತ್ತೂರು ಸರಕಾರಿ ಆಸ್ಪತ್ರೆಗೆ ಸೇರಿದ ಕಟ್ಟಡದಲ್ಲಿ ಈ ಕೇಂದ್ರ ಕಾರ್ಯಾಚರಿಸುತ್ತಿತ್ತು. ಕೇಂದ್ರ ಬಂದ್ ಆಗಿರುವ ಕಾರಣ ಕಟ್ಟಡವನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಆಸ್ಪತ್ರೆಯ ವತಿಯಿಂದ ಆರೋಗ್ಯ ಇಲಾಖೆಗೆ ಮನವಿಯನ್ನೂ ಸಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ADVERTISEMENT