ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ವಂಡಾರು ಕೆಳಮನೆ ಪ್ರತಿಭಾವಂತ ಬಾಲಕ ಧನುಷ್ ಶೆಟ್ಟಿ ಅವರು ತಮ್ಮ ಬಾಲ್ಯದಲ್ಲಿಯೇ ಬಹುಮುಖ ಪ್ರತಿಭೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಂದೆ ಆನಂದ್ ಶೆಟ್ಟಿ ಮತ್ತು ತಾಯಿ ದೀಪಾ ಶೆಟ್ಟಿ ಇವರ ಹೆಮ್ಮೆಯ ಪುತ್ರನಾದ ಧನುಷ್, ಪ್ರಸ್ತುತ ಕೊಕ್ಕರ್ಣೆ ದುರ್ಗಾ ಆಂಗ್ಲ ಮಾದ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಮಾನ ಆಸಕ್ತಿ ತೋರಿರುವುದು ಅವರ ವಿಶಿಷ್ಟತೆಯಾಗಿದೆ.

ಸಣ್ಣ ವಯಸ್ಸಿನಲ್ಲಿಯೇ ಶ್ರಮ, ಶಿಸ್ತಿನ ಮೂಲಕ ತಮ್ಮ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಿಸಿಕೊಂಡಿರುವುದು ಧನುಷ್‌ರ ಜೀವನದ ಪ್ರಮುಖ ಸಾಧನೆಯಾಗಿದೆ. ಕೇವಲ 9 ನಿಮಿಷ 33 ಸೆಕೆಂಡುಗಳಲ್ಲಿ 1477 ಬಾರಿ ಸ್ಕಿಪ್ಪಿಂಗ್ ಮಾಡುವ ಮೂಲಕ ಅವರು ಈ ದಾಖಲೆ ಸಾಧಿಸಿದ್ದಾರೆ. ಈ ಸಾಧನೆಯು ಅವರ ಪರಿಶ್ರಮ, ದೃಢತೆ ಮತ್ತು ಕ್ರೀಡೆಗೆ ಇರುವ ಅಪಾರ ಪ್ರೀತಿಯನ್ನೂ ತೋರಿಸುತ್ತದೆ.
ಕ್ರೀಡೆ ಕ್ಷೇತ್ರದಲ್ಲಿ ಧನುಷ್‌ರ ಸಾಧನೆ ಇಲ್ಲಿ ನಿಲ್ಲುವುದಿಲ್ಲ. ಅವರು ಕರಾಟೆ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯ ತೋರಿದ್ದು, ಶಿವಮೊಗ್ಗದಲ್ಲಿ ನಡೆದ 6ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ – 2025ರಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಸಾಧನೆಯ ಮೂಲಕ ಅವರು ತಮ್ಮ ಗ್ರಾಮದ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದಾರೆ.
ಇದಲ್ಲದೆ, ಧನೂಷ್ ಅವರಿಗೆ India Star Passion Award – 2025 ಗೌರವ ದೊರೆತಿದ್ದು, ಅವರ ಬಹುಮುಖ ಪ್ರತಿಭೆಯನ್ನು ದೇಶ ಮಟ್ಟದಲ್ಲಿ ಗುರುತಿಸುವ ಮಹತ್ವದ ಕ್ಷಣವಾಗಿದೆ.
ಧನುಷ್ ಕಲೆ ಕ್ಷೇತ್ರದಲ್ಲಿಯೂ ಸಮಾನ ಪ್ರತಿಭೆ ತೋರಿಸಿದ್ದಾರೆ. ಅವರು ರಾಷ್ಟ್ರೀಯ ಮಟ್ಟದ ಚಿಲ್ಡ್ರನ್ಸ್ ಚಿತ್ರಕಲೋತ್ಸವಗಳಲ್ಲಿ ಭಾಗವಹಿಸಿ ತಮ್ಮ ಕಲಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಅದಲ್ಲದೇ ಶಾಲಾ ಮಟ್ಟದಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದವರೆಗೆ ವಿವಿಧ ಕ್ರೀಡೆ ಹಾಗೂ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗಳಿಸಿದ್ದಾರೆ.
ಒಂದು ವಿದ್ಯಾರ್ಥಿಯಾಗಿ ಧನುಷ್ ಶ್ರಮ, ಶಿಸ್ತಿನ ನಡವಳಿಕೆ, ಕಲಿಕಾ ಆಸಕ್ತಿ ಹಾಗೂ ಕ್ರೀಡಾ ಮನೋಭಾವಗಳಿಂದ ಇತರ ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ. ಇಂತಹ ಪ್ರತಿಭಾವಂತ ಬಾಲಕರಿಗೆ ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಸಾಧನೆಗಳ ದಾರಿ ಬಾಗಿಲು ತೆರೆದುಕೊಳ್ಳುವುದು ಖಚಿತ. ಧನುಷ್ ಶೆಟ್ಟಿ ಅವರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಬಹುಮುಖತೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಹೆಮ್ಮೆಯ ವ್ಯಕ್ತಿತ್ವವನ್ನು ನೀಡಲಿದೆ ಎಂಬ ವಿಶ್ವಾಸವಿದೆ.
ಲೇಖನ : ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ