ಕಠ್ಮಂಡು: ಕಳೆದ ನಾಲ್ಕೈದು ದಿನಗಳಿಂದ ನೇಪಾಳದಲ್ಲಿ ನಡೆಯುತ್ತಿದ್ದ ಜೆನ್ ಝೀ ಪ್ರತಿಭಟನೆ ಹಿಂಸಾರೂಪ ಪಡೆದು ಗಲಭೆಗಳು ನಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಹಿಂಸಾಚಾರ ಮತ್ತು ಗಲಭೆಗಳ ನಂತರ ಇದೀಗ ನೇಪಾಳದಲ್ಲಿ ಶಾಂತಿ ನಿಧಾನವಾಗಿ ಮರಳುತ್ತಿದೆ.
ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನಿನ್ನೆ ರಾತ್ರಿ ಪ್ರಮಾಣವಚನ ಸ್ವೀಕರಿಸಿದ ನಂತರ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಇಂದು ಬೆಳಿಗ್ಗೆ 5 ಗಂಟೆಯಿಂದ ಕರ್ಫ್ಯೂ ಮತ್ತು ನಿಷೇಧಾಜ್ಞೆಗಳನ್ನು ತೆಗೆದುಹಾಕಲಾಗಿದೆ. ಮಧ್ಯಂತರ ಸರ್ಕಾರ ರಚನೆಯಾದ ನಂತರ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ. ಆದರೆ, ನೇಪಾಳದ ಬೀದಿಗಳಲ್ಲಿ ಸೈನ್ಯದ ಉಪಸ್ಥಿತಿಯು ಇನ್ನೂ ಕೆಲವು ದಿನಗಳವರೆಗೆ ಉಳಿಯುವ ನಿರೀಕ್ಷೆಯಿದೆ.
ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಸರ್ಕಾರದ ಉಸ್ತುವಾರಿ ವಹಿಸಿಕೊಂಡ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ನೇಪಾಳದ ನೂತನ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಸುಶೀಲಾ ಕರ್ಕಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೇಪಾಳದ ಸಹೋದರ ಸಹೋದರಿಯರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತ ಸಂಪೂರ್ಣವಾಗಿ ಬದ್ಧವಾಗಿದೆ’ ಎಂದು ಹೇಳಿದ್ದಾರೆ.
ಸುಶೀಲಾ ಕರ್ಕಿ ಅವರು ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾದ ನಂತರ, ನೇಪಾಳದ ಜನರು ಭ್ರಷ್ಟಾಚಾರ ಮುಕ್ತ ಆಡಳಿತದ ನಿರೀಕ್ಷೆ ಮಾತ್ರವಲ್ಲದೇ, ಈ ಹಿಂದೆ ಭ್ರಷ್ಟಾಚಾರ ಆರೋಪಗಳಲ್ಲಿ ಭಾಗಿಯಾಗಿರುವ ಮಾಜಿ ಪ್ರಧಾನಿ ಸೇರಿದಂತೆ ಎಲ್ಲಾ ಸಚಿವರ ಆಸ್ತಿಯನ್ನು ತನಿಖೆ ಮಾಡುವುದರ ಜೊತೆಗೆ ನೇಪಾಳವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸುವ ಭರವಸೆಯಲ್ಲಿದ್ದಾರೆ.
ಹೋಟೆಲ್ ಉದ್ಯಮಕ್ಕೆ 2500 ಕೋಟಿ ರೂಪಾಯಿ ನಷ್ಟ!
ನೇಪಾಳದಲ್ಲಿ ಜೆನ್ ಝಡ್ ಜನರು ನಡೆಸಿದ ಪ್ರತಿಭಟನೆಗಳಲ್ಲಿ ನಡೆದ ಹಿಂಸಾಚಾರದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಇದರಲ್ಲಿ 21 ಪ್ರತಿಭಟನಾಕಾರರು, 9 ಕೈದಿಗಳು, 3 ಪೊಲೀಸರು ಮತ್ತು 18 ಇತರ ಜನರು ಸೇರಿದ್ದಾರೆ. ಇನ್ನೊಂದು ಮುಖ್ಯ ಸಂಗತಿ ಅಂದ್ರೆ, ಈ ಹಿಂಸಾಚಾರದಿಂದಾಗಿ ನೇಪಾಳದ ಹೋಟೆಲ್ ಉದ್ಯಮದ ಮೇಲೆ ಅತಿ ದೊಡ್ಡ ಪರಿಣಾಮ ಬೀರಿದ್ದು, ವರದಿಗಳ ಪ್ರಕಾರ, ನೂರಾರು ಹೋಟೆಲ್‌ಗಳಲ್ಲಿ ನಡೆದ ವಿಧ್ವಂಸಕ ಕೃತ್ಯ, ಲೂಟಿ ಮತ್ತು ಬೆಂಕಿ ಹಚ್ಚುವಿಕೆ ಘಟನೆಗಳಿಂದಾಗಿ ಹೋಟೆಲ್ ಉದ್ಯಮವು ಸುಮಾರು 2500 ಕೋಟಿ ನೇಪಾಳಿ ರೂಪಾಯಿಗಳಿಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ ಎಂದು ತಿಳಿದು ಬಂದಿದೆ.
ಗಲಭೆಕೋರರ ವೀಡಿಯೊಗಳನ್ನು ಕೇಳಿದ ಪೊಲೀಸರು
ನೇಪಾಳದಾದ್ಯಂತ ನಡೆದ ಹಿಂಸಾಚಾರ, ಬೆಂಕಿ ಹಚ್ಚುವಿಕೆ ಮತ್ತು ಲೂಟಿ ಘಟನೆಗಳ ಬಗ್ಗೆ ನೇಪಾಳ ಪೊಲೀಸರು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿದ ವೀಡಿಯೊಗಳು ಅಥವಾ ಸಾಕ್ಷಿಗಳನ್ನು ಹೊಂದಿರುವವರು ಅವುಗಳನ್ನು ನಮ್ಮ ಜೊತೆ ಹಂಚಿಕೊಳ್ಳಬೇಕು, ಇದರಿಂದ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕಾಗಿ, ಪೊಲೀಸರು ಅಧಿಕೃತ ಇಮೇಲ್ ಅನ್ನು ಬಿಡುಗಡೆ ಮಾಡಿದ್ದು, ಅಂತಹ ಎಲ್ಲಾ ವೀಡಿಯೊಗಳನ್ನು ಕಳುಹಿಸಲು ಮನವಿ ಮಾಡಿದ್ದಾರೆ.