ಗುರುಶ್ರೀ ರಾಜ್ಯ ಪ್ರಶಸ್ತಿ – ಡಾ. ಮಮತ ಸಾಧನೆಗೆ ಮತ್ತೊಂದು ಗರಿ

0
23

ಬೆಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿವೇಕ ಚೇತನ ಬಾರಿಟಬಲ್ ಟ್ರಸ್ಟ್ (ರಿ) ಹಾಗೂ ಶ್ರೀ ರಾಘವೇಂದ್ರ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಶಿಕ್ಷಣ ತಜ್ಞೆ, ಸಂಪನ್ಮೂಲ ವ್ಯಕ್ತಿ, ಕವಯತ್ರಿ ಮತ್ತು ಲೇಖಕಿ ಡಾ. ಮಮತ ಹೆಚ್.ಎ. ಅವರಿಗೆ “ಗುರುಶ್ರೀ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಡಾ. ಮಮತ ಅವರು ಎಂ.ಎ., ಎಂ.ಎಡ್ ಪದವೀಧರರಾಗಿದ್ದು, ಸ್ಟೇಟ್, ಐಸಿಎಸ್ಇ, ಸಿಬಿಎಸ್‌ಇ ಹಾಗೂ ಐಬಿ ಪಠ್ಯಕ್ರಮಗಳಲ್ಲಿ ಪರಿಣತಿ ಪಡೆದಿದ್ದಾರೆ. ಕರ್ನಾಟಕದಲ್ಲೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಶಾಲೆಗಳಿಗೆ ಪಠ್ಯಕ್ರಮವನ್ನು ರಚಿಸಿ, ಅದಕ್ಕೆ ಸೂಕ್ತ ಪಠ್ಯಪುಸ್ತಕಗಳನ್ನು ತಯಾರಿಸಿದ ಸಾಧನೆ ಇವರದಾಗಿದೆ. ಪ್ರಸ್ತುತ ಅವರು One World International School ನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ೧೭ ವರ್ಷಗಳ ಬೋಧನಾ ಅನುಭವವನ್ನು ಹೊಂದಿದ್ದಾರೆ.

ಸಿ.ಬಿ.ಎಸ್.ಇ ಬೋರ್ಡ್ ಇವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಮಾಡಿದ್ದು, ಇತರ ಶಾಲೆಗಳಲ್ಲಿಯೂ ಮಾತೃಭಾಷೆ ಕನ್ನಡ, ಧ್ಯಾನ, ಮೈಂಡ್ ಪವರ್ ಕುರಿತಾದ ತರಬೇತಿ ಹಾಗೂ ಉಪನ್ಯಾಸಗಳನ್ನು ನೀಡುತ್ತಿದ್ದಾರೆ. ಅನೇಕ ಶಿಕ್ಷಣ ಸಂಬಂಧಿ ಪುಸ್ತಕಗಳನ್ನು ರಚಿಸಿ ಪ್ರಕಟಿಸಿರುವ ಅವರು, ಶಾಲಾ ಹಾಗೂ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಅತಿಥಿ, ಸಂಪನ್ಮೂಲ ವ್ಯಕ್ತಿ, ಆಪ್ತಸಮಾಲೋಚಕ, ಲೇಖಕಿ, ಕಥೆಗಾರ್ತಿ, ಕವಯತ್ರಿ, ಗಜಲ್‌ಗಾರ್ತಿ ಮುಂತಾದ ವಿಭಿನ್ನ ಹಣೆಪಟ್ಟಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇಂಗ್ಲಿಷ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುವುದರೊಂದಿಗೆ, ಡಾಕ್ಯುಮೆಂಟರಿ ಹಾಗೂ ಪ್ರೂಫ್ ಕರಕ್ಷನ್‌ಗಳಲ್ಲಿ ಸಹ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕೀರ್ತಿ ಇವರದಾಗಿದೆ. ಹಲವಾರು ಸಾಹಿತ್ಯ ಸಮಾರಂಭಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಇವರ ಬರಹಗಳು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ನಿಯಮಿತವಾಗಿ ಪ್ರಕಟಗೊಂಡಿವೆ.

ಸಾಮಾಜಿಕ ಸೇವೆಯ ಕ್ಷೇತ್ರದಲ್ಲಿಯೂ ಅವರು ಮಾದರಿಯಾಗಿದ್ದು, ಮಹಿಳೆಯರಿಗೆ ಬ್ಯೂಟೀಷಿಯನ್, ಹೊಲಿಗೆ, ಫ್ಯಾಷನ್ ಡಿಸೈನಿಂಗ್, ಕರಕುಶಲತೆ, ಮೆಹಂದಿ, ಕಸೂತಿ ಮುಂತಾದ ವೃತ್ತಿಪರ ತರಗತಿಗಳನ್ನು ನೀಡಿ ಸ್ವಾವಲಂಬಿಗಳಾಗಲು ನೆರವಾಗಿದ್ದಾರೆ. ಬುದ್ಧಿಮಾಂದ್ಯ ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕ ಆರ್ಟ್ & ಕ್ರಾಫ್ಟ್ ತರಬೇತಿ ನೀಡಿ, ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮಹಿಳಾ ಸಬಲೀಕರಣ, ಪ್ರಕೃತಿ ಸಂರಕ್ಷಣೆ, ತೃತೀಯ ಲಿಂಗಿಗಳ ಹಕ್ಕುಗಳು, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸುವ ಶಿಕ್ಷಕರ ಪಾತ್ರ, ದೇಶಪ್ರೇಮ ಹಾಗೂ ಭಕ್ತಿ ಮೂಡಿಸುವ ಕುರಿತು ಸಂಶೋಧನಾ ಲೇಖನಗಳನ್ನು ಮಾಡಿದ್ದಾರೆ. ಅಲ್ಲದೆ, ಬೆಂಗಳೂರು ಮೆಟ್ರೋದಲ್ಲಿ ಶಿಸ್ತಿನ ನಡೆ–ನುಡಿಗಳ ಕುರಿತು ಜಾಹೀರಾತುಗಳ ಮೂಲಕ ಜನಜಾಗೃತಿ ಮೂಡಿಸಿದ್ದಾರೆ.

ಇವರ ಸಾಹಿತ್ಯ ಕೃತಿಗಳು, ಅಧ್ಯಯನಗಳು ಹಾಗೂ ಸಾಮಾಜಿಕ ಸೇವೆಯನ್ನು ಮೆಚ್ಚಿಕೊಂಡು ಅನೇಕ ಸಂಘ–ಸಂಸ್ಥೆಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಪುರಸ್ಕಾರ ಹಾಗೂ ಗೌರವಗಳನ್ನು ನೀಡಿ ಸನ್ಮಾನಿಸಿವೆ. ಸಾಹಿತ್ಯ ಕ್ಷೇತ್ರದಲ್ಲಿ ಇವರ ಹೆಸರು Karnataka Book of Records ಮತ್ತು World Book of Records‍ನಲ್ಲಿ ಸಹ ದಾಖಲಾಗಿದೆ.

ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ, ರಾಘವೇಂದ್ರ ಪ್ರಕಾಶನ ಹಾಗೂ ವಿವೇಕ ಚೇತನ ಟ್ರಸ್ಟ್ ಅಧ್ಯಕ್ಷರು ಪ್ರಶಸ್ತಿ ಪ್ರದಾನ ಮಾಡಿ, ಡಾ. ಮಮತ ಅವರ ಸಾಧನೆಗಳನ್ನು ಶ್ಲಾಘಿಸಿದರು.

ಅವರು ಶಿಕ್ಷಣ ಕ್ಷೇತ್ರದ ಜೊತೆಗೆ ಕಾವ್ಯ, ಲೇಖನ ಹಾಗೂ ಸಾಂಸ್ಕೃತಿಕ ಸೇವೆಯಲ್ಲಿ ನೀಡುತ್ತಿರುವ ಕೊಡುಗೆಗಳನ್ನು ಉನ್ನತವಾಗಿ ಪ್ರಸ್ತಾಪಿಸಿ, ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಸಾಧನೆಗಳನ್ನು ಮಾಡುವಂತೆ ಹಾರೈಸಿದರು.

ರಾಘವೇಂದ್ರ (ಶಿಕ್ಷಕರ ಸಂಪನ್ಮೂಲ ವ್ಯಕ್ತಿ)

LEAVE A REPLY

Please enter your comment!
Please enter your name here