ತುಳು ಭಾಷೆಯ ಮೂಲಕ ಬಾಂಧವ್ಯದ ಬೆಸುಗೆ : ವಂ. ಅರುಣ್ ವಿಲ್ಸನ್ ಲೋಬೋ

0
5

ಮಂಗಳೂರು : ತುಳು ಭಾಷೆಯ ಮೂಲಕ ತುಳುನಾಡಿನಲ್ಲಿ ಬಾಂಧವ್ಯದ ಬೆಸುಗೆಯನ್ನು ಬೆಸೆಯಲಾಗಿದೆ. ಎಲ್ಲಾ ಜಾತಿ ಸಮುದಾಯದವರು ತುಳು ಭಾಷೆ ಬಗ್ಗೆ ವಿಶೇಷವಾದ ಅಭಿಮಾನವನ್ನು ಹೊಂದಿದ್ದಾರೆ ಎಂದು ಮಂಗಳೂರು ಪಾದುವಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಅರುಣ್ ವಿಲ್ಸನ್ ಲೋಬೋ ಅವರು ಹೇಳಿದರು.
ಅವರು ಮಂಗಳೂರು ಉರ್ವಸ್ಟೋರಿನ ತುಳು ಭವನದಲ್ಲಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಪಾದುವಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಆಯೋಜಿಸಿದ ‘ಅಕಾಡೆಮಿಡ್ ಒಂಜಿ ದಿನ, ಬಲೆ ತುಳು ಓದುಗ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಊರಿನ ಭಾಷೆಯ ಸಾಹಿತ್ಯ ಓದುವ ಮೂಲಕ ನಮ್ಮ ಪರಿಸರದ ಜ್ಞಾನ ಹಾಗೂ ಮಾಹಿತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಂದನೀಯ ವಿಲ್ಸನ್ ಲೋಬೋ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ತುಳು ಸಾಹಿತ್ಯ ಲೋಕದ ಪರಿಚಯ ಮಾಡುವ ಸಲುವಾಗಿ ಹಾಗೂ ಓದುವ ಅಭಿರುಚಿ ಮೂಡಿಸುವ ಉದ್ದೇಶದಿಂದ ಅಕಾಡೆಮಿಯಲ್ಲಿ ‘ಬಲೆ ತುಳು ಓದಗ’ ಅಭಿಯಾನ ಆಯೋಜಿಸಲಾಗಿದೆ ಎಂದರು.
ತುಳು ಅಕಾಡೆಮಿಯ ಗ್ರಂಥಾಲಯದಲ್ಲಿ ಸುಮಾರು ಐದು ಸಾವಿರ ಪುಸ್ತಕಗಳಿದ್ದು, ತುಳು ಭಾಷೆ, ಸಾಹಿತ್ಯ, ಜಾನಪದ, ಸಂಸ್ಕೃತಿ, ಇತಿಹಾಸದ ಬಗ್ಗೆ ಅಧ್ಯಯನ ಮಾಡುವವರಿಗೆ ಅನುಕೂಲಕರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾದುವಾ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ರೋಶನ್ ವಿನ್ಸಿ ಸಾಂತುಮಯೋರ್ , ಕಾರ್ಯಕ್ರಮದ ವಿದ್ಯಾರ್ಥಿ ಸಂಚಾಲಕ ನವೀನ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ 25 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಓದಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here