ತುಳು ನಾಡಗೀತೆಗೆ 125 ವರ್ಷದ ಜೈಘೋಷ
ತುಳುನಾಡು: “ಜಯ ಜಯ ಜಯ ತುಳುವ ಸೀಮೆದ ಅಪ್ಪೆ ನಾಡ್” ಎಂಬ ಘೋಷವಾಕ್ಯದೊಂದಿಗೆ ಜನಮಾನಸದಲ್ಲಿ ಅಳಿಸಲಾರದ ಸ್ಥಾನ ಪಡೆದಿರುವ ತುಳು ನಾಡಗೀತೆಗೆ 125 ವರ್ಷಗಳು ಪೂರ್ತಿಯಾಗಿವೆ. ತೀವ್ರ ಭಕ್ತಿಭಾವನೆ, ನಾಡಪ್ರೇಮ ಮತ್ತು ತುಳುವ ತಾಯ್ನಾಡಿನ ಶಕ್ತಿ-ಸಂಸ್ಕೃತಿಗಳ ಮಿಲನದಿಂದ ಜನುಮಿಸಿದ ಈ ಗೀತೆ, 1899ರಲ್ಲಿ ಪ್ರಸಿದ್ಧ ಕವಿ ಮೋನಪ್ಪ ತಿಂಗಳಾಯರ ಅವರಿಂದ ರಚಿತವಾಗಿದೆ. ಈ ನಾಡಗೀತೆ, ತನ್ನದೇ ಆದ ಧ್ವನಿ ಮತ್ತು ಉತ್ಸಾಹದಿಂದ, ನಾಡಿನ ದೇವತೆಗಳು, ನದಿಗಳು, ಶೂರವೀರರ ಶೌರ್ಯ, ಸಹೋದರತ್ವ, ತಾಯ್ಮೂಲ ಮತ್ತು ಧಾರ್ಮಿಕ ಐಕ್ಯತೆಯನ್ನು ಸಾರುತ್ತದೆ. ಇದು ಕೇವಲ ಕವಿತೆಯಲ್ಲ – ಒಂದು ಸಂಸ್ಕೃತಿಯ ಜೀವಂತ ಪ್ರತಿಬಿಂಬವಾಗಿದೆ.
ಈ ಗೀತೆ ಮೊದಲು 1899ರಲ್ಲಿ ರಚನೆಯಾಗಿ, 1915ರಲ್ಲಿ ಪ್ರಕಟಿತವಾಗಿದ್ದು, ಅದನ್ನು ಆಟಿ 12 ರಂದು ಜನಪ್ರಮುಖ ವೇದಿಕೆಯಲ್ಲಿ ಪ್ರಥಮವಾಗಿ ಗೀತಗಾನ ಮಾಡಲಾಯಿತು. ಈ ದಿನವನ್ನು ಇಂದು “ತುಳು ನಾಡಗೀತೆ ದಿನ” ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ಗೀತೆ ತುಳುನಾಡಿನ ವಿವಿಧ ಸಂಸ್ಥೆಗಳ ಉತ್ಸವಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಧ್ವನಿತವಾಗುತ್ತಿದ್ದು, ನಾಡಪ್ರೀತಿಯ ಭಾವನೆಗೆ ಮೆರುಗು ನೀಡುತ್ತದೆ. 2025ರ ಜುಲೈ 28, ಈ ಗೀತೆಯ 125ನೇ ವರ್ಷವಾಗಿದೆ. ಆದುದರಿಂದ ಈ ವರ್ಷ ತುಳುವಲ್ಡ್ ಫೌಂಡೇಶನ್, ತುಳುವ ಮಹಾಸಭೆಯ ಮೂಲಕ ಅಲ್ಲಲ್ಲಿ ಸಮೂಹ ಗಾಯನವನ್ನು ಏರ್ಪಡಿಸಲಿದೆ.
ನಾಡಪಟುಗಳು, ಸಾಂಸ್ಕೃತಿಕ ತಜ್ಞರು ಮತ್ತು ತಲೆಮಾರುಗಳನ್ನು ಒಗ್ಗೂಡಿಸುವ ಈ ಗೀತೆ, ಇಂದು ಹೆಚ್ಚು ಪ್ರಸ್ತುತವಾಗಿದ್ದು, ನಾಡರಕ್ಷಣೆಯ ದೈವದಂತೆ ಮೆರೆದು ನಿಂತಿದೆ. ಮೋನಪ್ಪ ತಿಂಗಳಾಯ ಅವರು ಕೇವಲ ಕವಿ ಮಾತ್ರ ಅಲ್ಲ, ತುಳು ನಾಡಾಭಿಮಾನಿ ಚಿಂತನಶೀಲ ಸಮಾಜ ಸೇವಕರು.
ಅವರ ನಾಡಪ್ರೀತಿಯ ದೀಪವೆಂದರೆ ಈ ಗೀತೆ, ಇದು ತುಳು ಭಾಷೆಯ ಅಸ್ತಿತ್ವಕ್ಕಾಗಿ ಶತಮಾನಗಳ ಹಿಂದೆ ಆರಂಭವಾದ ಜಾಗೃತಿಯ ಭಾಗವಾಗಿದೆ. 125 ವರ್ಷಗಳ ಇತಿಹಾಸವನ್ನು ಹೃದಯದಲ್ಲಿ ಹೊತ್ತುಕೊಂಡಿರುವ ತುಳು ನಾಡಗೀತೆ, ಇಂದು ಹೊಸ ಪೀಳಿಗೆಯ ಶ್ರವಣಕ್ಕೆ ಮತ್ತು ನಾಡಬಾಂಧವ್ಯಕ್ಕೆ ಒಂದು ಪವಿತ್ರ ಅನುಸಂಧಾನವಾಗಿದೆ. ತುಳುನಾಡಿನ ಭವಿಷ್ಯದ ಪಥವನ್ನು ಬೆಳಗಿಸಬಲ್ಲ ಶಕ್ತಿ ಈ ನಾಡಗೀತೆಯಲ್ಲಿ ಇದೆ.
“ಜಯ ಜಯ ಜಯ ತುಳುವ ಸೀಮೆದ ಅಪ್ಪೆ” ಹಾಡನ್ನು ಬಹುಭಾಷಾ ಸಂಗೀತ ನಿರ್ದೇಶಕ, ತುಳು ನಾಡಿನ ಹೆಮ್ಮೆಯ ಸಾಹಿತ್ಯಗಾರ, ಕನ್ನಡ ಸೇವಾ ರತ್ನ ಪುರಸ್ಕೃತ ಪ್ರಮೋದ್ ಸಪ್ರೆಯವರು ರಾಗ ತಾಳ ಲಯಬದ್ಧವಾಗಿ ಸಭಾಂಗಣದಲ್ಲಿ ನೆರೆದವರಿಗೆ ಹೇಳಿಕೊಟ್ಟು,ಹಾಡಿಸಿ, ನೆರೆದ ಜನಮಾನಸದಲ್ಲಿ ಹಳೆಯ ಹಾಡು ಮತ್ತೆ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಯಿತು, 125 ವರ್ಷಗಳ ಹಳೆಯ ಹಾಡೊಂದು ಮತ್ತೊಮ್ಮೆ ಜನರ ಮನಪಟಲದಲ್ಲಿ ಶಾಶ್ವತ ಸ್ಥಾನ ಪಡೆಯುವ ಯಶಸ್ಸು ದಾಖಲಿಸಿತು.
ತುಳು ವರ್ಲ್ಡ್ ಸಂಸ್ಥೆಯ ನಿರ್ದೇಶಕ ರಾಜೇಶ ಆಳ್ವ ಮಾತನಾಡಿ, ತುಳುವ ಭಾಷೆಯ ಜನರಿಗಾಗಿ ತುಳುವ ಜನರಿಂದಲೇ ನಡೆಯುವ ಸಂಸ್ಥೆ ತುಳು ವರ್ಲ್ಡ್ ಆಗಿದ್ದು, ತುಳು ನಾಡಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವುದರ ಮೂಲಕ ತನ್ಮೂಲಕ ಸಮಾಜ ಸೇವೆಯಲ್ಲಿ ಭಾಗಿಯಾಗುವಂತೆ ಕರೆ ನೀಡಿದರು, ತುಳು ನಾಡಿನ ಆರಾಧ್ಯ ದೇವರಾದ ಬಸ್ರೂರಿನ ತುಳುವೇಶ್ವರ ದೇವಸ್ಥಾನ ಅಭಿವೃದ್ಧಿಯಲ್ಲಿ ತುಳು ನಾಡಿನ ಪ್ರತಿಯೊಬ್ಬರು ಸಹಕರಿಸುವಂತೆ ವಿನಂತಿಸಿದರು, ತುಳುನಾಡಿನ ಮನಸ್ಸುಗಳು ಒಂದಾದಾಗ ಪುರಾತನ ತುಳು ಭಾಷೆಯ,ಆಚರಣೆಗಳ, ಶ್ರೀಮಂತ ಪರಂಪರೆ ಆಧುನಿಕ ಜಗತ್ತಿನಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ, ಎಲ್ಲರೂ ಸೇರಿ ಈ ಅಗತ್ಯ ಕೆಲಸ ಮಾಡೋಣ ಎಂದರು.
ಮುಲ್ಕಿ ವಲಯ ತುಳುವ ಮಹಾಸಭೆ ಸಂಚಾಲಕಿ ಭಾನುಮತಿ ಶೆಟ್ಟಿ ಕಕ್ವಗುತ್ತು ಕಾರ್ಯಕ್ರಮ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಮುಲ್ಕಿ ತುಳುವ ಮಹಾಸಭೆ ವತಿಯಿಂದ ಗೀತ ಗಾಯನ ತರಬೇತಿಯನ್ನು ನಡೆಸಲು ಉದ್ದೇಶವಿದ್ದು ಸರ್ವರೂ ಸಹಕಾರ ನೀಡುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಭಾಗದಲ್ಲಿ ಸಾಧನೆ ಮಾಡಿ, ಪ್ರಗತಿಪರ ಕೃಷಿಕರಾದ, ಕುಡೆತ್ತೂರು ಹರೀಶ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸದಸ್ಯರು, ತುಳು ಆಯನ ಕೂಟದ ಸದಸ್ಯರು, ತುಳು ವರ್ಲ್ಡ್ ಸದಸ್ಯರು, ಮಂದಾರ ಪ್ರತಿಷ್ಠಾನ ಸದಸ್ಯರು, ವಾಯ್ಸ್ ಅಪ್ಪ ಆರಾಧನಾ ಸದಸ್ಯರು, ಕಟೀಲು ಕಾಲೇಜಿನ ಶಿಕ್ಷಕ ವರ್ಗ, ಕೊಡೆತೂರು ಕುಂಜೀರಾಯ ದೈವಸ್ಥಾನದ ಆಡಳಿತ ಸಮಿತಿ ಸದಸ್ಯರು, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಶೇಷ ವರದಿ: ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ

