ಉಡುಪಿ: ರಾಜ್ಯ ಸರ್ಕಾರದ ಹೊಸ ಸಾಮಾಜಿಕ ಗಣತಿಯಲ್ಲಿ ಹಿಂದೂ ಜಾತಿಗಳ ಜೊತೆ ಕ್ರಿಶ್ಚಿಯನ್ ಎಂಬ ಪದ ಬಳಕೆ ಮಾಡಿದ್ದಾರೆ. ಮತಾಂತರಗೊಳ್ಳಲು ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆಯೋಗದ ಮೂಲಕ ಮತಾಂತರಕ್ಕೆ ಅವಕಾಶ ನೀಡಿದಂತಾಗಿದೆ. ಹಿಂದೂ ಧರ್ಮದ ಸಣ್ಣ ಜಾತಿಗಳನ್ನು ಸರ್ಕಾರ ಒಡೆಯಲು ಹೊರಟಿದೆ. ಮತಾಂತರ ಮಾಡಲು ಸರ್ಕಾರವೇ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯಿತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ ಹೀಗೆ 42 ರಿಂದ 50 ಜಾತಿಯ ಜೊತೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿದ್ದಾರೆ. ಈ ಬಗ್ಗೆ ನಮ್ಮ ಕಠಿಣ ವಿರೋಧ ಇದೆ. ಸರ್ಕಾರವೇ ನೇರ ನಿಂತು ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ. ಜಾತಿ ಸೂಚಕದ ಮುಂದೆ ಕ್ರಿಶ್ಚಿಯನ್ ಎಂಬ ಪದ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಕಾಂತರಾಜ್ ವರದಿಯನ್ನು ಈ ಸರ್ಕಾರ ತಿರಸ್ಕರಿಸಿಲ್ಲ. ಅಂಗೀಕರಿಸಿಯೂ ಇಲ್ಲ. 165 ಕೋಟಿ ರೂಪಾಯಿ ಬಿಡುಗಡೆ ಮಾಡಿ ರ್ಖಚಾಗಿದೆ. ಈಗ ಮತ್ತೊಮ್ಮೆ ಹೊಸ ವರದಿಗೆ ಸಿದ್ದರಾಮಯ್ಯ ಸರ್ಕಾರ ಹೊರಟಿದೆ ಎಂದು ದೂರಿದರು.
ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಶೋಧ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯಿಸಿ, ಧರ್ಮಸ್ಥಳ ದೇವಸ್ಥಾನದ ಬಗ್ಗೆ, ದೇವರ ಬಗ್ಗೆ ಅಪಪ್ರಚಾರ ಮಾಡಬಾರದು. ಇದು ಬಿಜೆಪಿಯ ಹೋರಾಟದ ಉದ್ದೇಶ. ಸೌಜನ್ಯಳಿಗೆ ನ್ಯಾಯ ಸಿಗಬೇಕು, ತನಿಖೆ ಆಗಬೇಕು. ಎಸ್ ಐಟಿ ಸತ್ಯ ಶೋಧನೆ ಮಾಡಿ ಶೀಘ್ರ ವಾಸ್ತವಿಕ ವರದಿ ಕೊಡಬೇಕು. ಜೆಸಿಬಿ ಹಿಂದೆ ಸುತ್ತಿದರೆ ಸರ್ಕಾರದ ಮೂಲ ಉದ್ದೇಶಕ್ಕೆ ನ್ಯಾಯ ಕೊಟ್ಟಂತೆ ಆಗುವುದಿಲ್ಲ. ಷಡ್ಯಂತ್ರ ಮಾಡಿದ್ದು ಹೌದಾದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳದ ಭಕ್ತಾದಿಗಳ ಭಾವನೆಗೆ ಬೆಲೆ ಕೊಡಬೇಕು. ಯೂಟ್ಯೂರ್ಬಸ್ ಮೇಲೆ ಹಲವಾರು ಆಪಾದನೆ ಬಂದಿತ್ತು. ಈ ಬಗ್ಗೆ ನಾನು ಇಡಿಗೆ ಪತ್ರ ಬರೆದಿದ್ದೆ. ಇಡಿ ಪ್ರಾಥಮಿಕ ಹಂತದ ತನಿಖೆಗಳನ್ನು ಆರಂಭಿಸಿದೆ. ಇಡಿ ತನಿಖೆ ವರದಿ ಆಧರಿಸಿ ಯಾವ ತನಿಖೆ ಮಾಡಬೇಕು ಎಂಬುದನ್ನು ಕೇಂದ್ರ ನಿರ್ಧಾರ ಮಾಡುತ್ತದೆ. ನಾವು ರಾಜ್ಯ ಎಸ್ಐಟಿ ಪೊಲೀಸರ ತನಿಖೆ ವರದಿಗೆ ಕಾಯುತ್ತಿದ್ದೇವೆ ಎಂದರು.