ಕೈಕಂಬ : ಸರಿಯಾದ ಸಮತೋಲಿತ ಆಹಾರ ಅಪೌಷ್ಟಿಕತೆಯನ್ನು ಕಡಿಮೆ ಮಾಡುವುದರ ಜೊತೆಗೆ, ಮಕ್ಕಳಿಗೆ ಅಗತ್ಯವಾದ ಪೌಷ್ಟಿಕಾಂಶವನ್ನು ಒದಗಿಸಿ ಆರೋಗ್ಯವನ್ನ ಸುಧಾರಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಯಾದ ಶ್ರೀಮತಿ ಶೈಲ ಕಾರಗಿಯವರು ಪೋಷಣ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಳಿದರು.
ಅವರು ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ಗ್ರಾಮಾಂತರ ಹಾಗೂ ಕಂದಾವರ ಗ್ರಾಮ ಪಂಚಾಯತ್ ಇವರ ಸಹಯೋಗದೊಂದಿಗೆ ಬಜಪೆ 2 ನೇ ವಲಯ ಆಯೋಜನೆಯಲ್ಲಿ
ಕಿನ್ನಿಕಂಬಳದ ಶ್ರೀ ರಾಧಾಕೃಷ್ಣ ಭಕನಾ ಮಂದಿರದಲ್ಲಿ ನಡೆದ , ಪೌಷ್ಟಿಕ ಆಹಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಪ್ರಚಲಿತದಲ್ಲಿರುವ ಅಪೌಷ್ಟಿಕ ಸಮಸ್ಯೆಯನ್ನು ನಿಭಾಯಿಸುವ ಉದ್ದೇಶದಿಂದ ಭಾರತ ಸರ್ಕಾರವು ಪೋಷಣ್ ಅಭಿಯಾನವನ್ನು ಪ್ರಾರಂಬಿಸಿದೆ. ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರವು ಅತ್ಯಗತ್ಯ, ಏಕೆಂದರೆ ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಾದ ಪ್ರೋಟೀನ್‌ಗಳು, ಜೀವಸತ್ವಗಳು, ಖನಿಜಗಳು ಮತ್ತು ಫೈಬರ್‌ಗಳನ್ನು ಒದಗಿಸುತ್ತದೆ, ಇದು ಬೆಳವಣಿಗೆ, ಶಕ್ತಿ ಮತ್ತು ರೋಗನಿರೋಧಕ ಶಕ್ತಿಗೆ ಸಹಕಾರಿಯಾಗುತ್ತದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೇಳೆ ಕಾಳುಗಳು, ಹಾಲು ಮತ್ತು ಮೀನು ಮುಂತಾದ ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ರಕ್ತಹೀನತೆ, ಬೊಜ್ಜು, ಮತ್ತು ದೀರ್ಘಕಾಲೀನ ರೋಗಗಳನ್ನು ತಡೆಯುತ್ತದೆ. ಸಮತೋಲಿತ ಪೌಷ್ಟಿಕ ಆಹಾರವು ಉತ್ತಮ ಬೆಳವಣಿಗೆ, ಸದೃಢ ಮನಸ್ಸು ಮತ್ತು ದೀರ್ಘಾಯುಷ್ಯಕ್ಕೆ ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ಶಶಿಕಾಂತ್ ಮಾತನಾಡಿ, ನಮ್ಮ ಆರೋಗ್ಯಕರ ಬದುಕಿಗಾಗಿ ನಮ್ಮ ಆಹಾರ ಕ್ರಮವನ್ನು ಬದಲಾಯಿಸಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ ಕಂದಾವರ ಪದವಿನ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಮಾತನಾಡಿ, ಅಂಗನವಾಡಿ ಕೇಂದ್ರಗಳು ಸಮುದಾಯದ ಪ್ರಮುಖ ಭಾಗವಾಗಿದೆ. ಕೇಂದ್ರಗಳ ಅಭಿವೃದ್ಧಿಯಲ್ಲಿ ಸಮುದಾಯ ಕೈ ಜೋಡಿಸುವುದು ಅಗತ್ಯವಿದೆ ಎಂದು ಹೇಳಿದರು.
ಜೋಕಟ್ಟೆ ಸರಕಾರೀ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ! ಹೇಮಮತ್ ಹಾಗೂ ಇಲಾಖೆಯ ಮತ್ತು ಸಿ.ಎಸ್.ಸಿ ತಾಲೂಕು ನೋಡಲ್ ಅಧಿಕಾರಿ ಧನಂಜಯ ಇವರು ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಿದರು.
ಕಂದಾವರ ಪಂಚಾಯತ್ ನ ಉಪಾಧ್ಯಕ್ಷ ಉದಯ್ ಆರ್. ರಾವ್, ಕಾರ್ಯದರ್ಶಿ ಜಲಜಾಕ್ಷಿ, ಸದಸ್ಯರುಗಳಾದ ಉಮೇಶ್ ಕೋಟ್ಯಾನ್ , ರಮೇಶ್ ಶೆಟ್ಟಿ, ಮಾಲತಿ,
ಪಡು ಪೆರಾರ್ ಪಂಚಾಯತ್ ನ ಅಧ್ಯಕ್ಷೆ ಮೀನಾಕ್ಷಿ, ಪಡು ಪೆರಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಮೂಲ್ಯ, ಸದಸ್ಯರುಗಳಾದ ಫೆಲ್ಸಿ ರೋಡ್ರಿಗಸ್, ನೂರ್ ಮಹಮ್ಮದ್ , ಫಾಸ್ಕಲ್
ವೆನ್ ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದ ಮುಖ್ಯ ವೈದ್ಯಾಧಿಕಾರಿಯಾದ ಡಾ!ಅಜಿತನಾಥ ಇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಜಪೆ 2 ನೇ ವಲಯದ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬಗೆಯ ಪೌಷ್ಟಿಕ ಆಹಾರಗಳನ್ನು ತಯಾರಿಸಿ ಪ್ರದರ್ಶಿಸಿ ವಿತರಿಸಿದರು. ಅಂಗನವಾಡಿಗಳಲ್ಲಿ ಬೆಳೆಸುವ ವಿವಿಧ ಬಗೆಯ ಹಣ್ಣು ತರಕಾರಿಗಳ ಗಿಡಗಳ ಪ್ರದರ್ಶನ ಕೂಡಾ ನಡೆಯಿತು.
ಬಜಪೆ 2 ನೇ ವಲಯದ ಅಂಗನವಾಡಿ ಶಿಕ್ಷಕರು, ಸಹಾಯಕಿಯರು, ಫಲಾನುಭವಿ ಮಕ್ಕಳ ಪೋಷಕರು ಮುಂತಾದವರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂಗಳೂರು ಗ್ರಾಮಾಮಂತರ ಬಜಪೆ ವಲಯದ ಮೇಲ್ವೀಚಾರಕರಾದ ಕಲ್ಪನಾ ಸ್ವಾಗತಿಸಿ, ಸ್ವಾತಿ ವಂದಿಸಿದರು. ಉಷಾ, ರಾಜೀವಿ ಮತ್ತು ಯೋಗಾಕ್ಷಿ ಪ್ರಾರ್ಥಿಸಿದರು. ಭರತ್ ಎಸ್. ಕರ್ಕೆರ ಕಾರ್ಯಕ್ರಮ ನಿರೂಪಿಸಿದರು.

