ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರುತ್ತಿರುವ ನವರಾತ್ರಿ ಮಹೋತ್ಸವದಲ್ಲಿ ಪ್ರತಿನಿತ್ಯವೂ ಭಕ್ತರಿಂದ ಜೋಡಿ ಚಂಡಿಕಾಯಾಗ ಸಮರ್ಪಣೆಗೊಳ್ಳುತ್ತಿದೆ.
ದುರ್ಗಾದೇವಿಯ ಒಂಬತ್ತು ಅಭಿವ್ಯಕ್ತಿಗಳನ್ನು ವಿಶೇಷವಾಗಿ ನವರಾತ್ರಿ ಹಬ್ಬದ ಸಂದರ್ಭ ಪೂಜಿಸಲಾಗುತ್ತದೆ. ಅಲ್ಲಿ ಕ್ರಮವಾಗಿ ಆಯ್ಕೆಯ ಒಂಬತ್ತು ರೂಪಗಳು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕುಷ್ಮಾಂಡ, ಸ್ಕಂದ ಮಾತಾ, ಕಾಳರಾತ್ರಿ, ಕಾತ್ಯಾಯಿನಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ. ನವರಾತ್ರಿಯ 10ನೇ ದಿನ ವಿಜಯದಶಮಿ. ಹೀಗೆ ನವರಾತ್ರಿ ಪೂಜೆ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ನಂಬಿಕೆ. ಗರ್ಭಗೃಹದಲ್ಲಿ ಆರೂಢಳಾದ ಆದಿಶಕ್ತಿಯನ್ನು 9 ದಿನವೂ ಆಯಾಯ ದಿನದಂತೆ ಒಂಬತ್ತು ರೂಪದಲ್ಲಿ ಅಲಂಕರಿಸಲಾಗುತ್ತಿದೆ.
ಕ್ಷೇತ್ರದಲ್ಲಿ ದಿನಂಪ್ರತಿ ಸಂಪನ್ನಗೊಳ್ಳುವ ಜೋಡಿ ಚಂಡಿಕಾಯಾಗದಲ್ಲಿ ಪಂಚವರ್ಣಾತ್ಮಕವಾದ ಮಂಡಲ ರಚನೆಯೂ ಆಯಾಯ ದೇವಿಯನ್ನು ಪ್ರತಿಬಿಂಬಿಸುವಂತಿರುತ್ತದೆ. ಇಲ್ಲಿ ಚಂಡಿಕಾಯಾಗವು ಪೂರ್ಣಮಾನ ರೀತಿಯಲ್ಲಿ ನೆರವೇರುತ್ತಿದೆ. ಕಲ್ಪೋಕ್ತ ಪೂಜೆಯಲ್ಲಿ ಪಂಚಾಮೃತ ಸಹಿತ ಮಂಗಳ ದ್ರವ್ಯವನ್ನು ಸಮರ್ಪಿಸಲಾಗುತ್ತದೆ. ಶಾಸ್ತ್ರಗಳು ಕಲ್ಪೋಕ್ತ ಪೂಜೆಯ ಅನಂತ ಫಲವನ್ನು ವರ್ಣಿಸುತ್ತದೆ. ಪೂರ್ಣಹುತಿಯಲ್ಲಿ ಪ್ರಮುಖವಾಗಿ ಸೀರೆ, ಕಬ್ಬು, ಎಳ್ಳು, ತಾವರೆ, ಮಾದ್ರಫಲ, ಬಿಲ್ವಪತ್ರೆ, ತುಪ್ಪ, ಮೊಸರು, ಹಾಲು, ಸಾಸಿವೆ, ತೆಂಗಿನಕಾಯಿ, ಅರಳು, ಕೇಸರಿ, ಗುಗ್ಗಳ, ಅಗರು, ಗಂಧ, ಬಾಳೆಹಣ್ಣು, ಅರಶಿನ, ಕುಂಕುಮ, ಸಿಂಗಾರದ ಹೂವು, ಕೇಪಳ ಹೂವು, ಗರಿಕೆ ಹುಲ್ಲು, ಪಚ್ಚ ಕರ್ಪೂರ ಸಮರ್ಪಿಸಲಾಗುತ್ತದೆ. ಇಲ್ಲಿ ಸಮರ್ಪಿಸುವ ಸೇವೆಯಿಂದ ನಿಶ್ಚಿತ ಫಲ ನಿಶ್ಚಯ ಎಂದು ಮನಗಾಣುವ ಭಕ್ತರು ಮತ್ತೊಮ್ಮೆ ತಮ್ಮ ಸೇವೆಯನ್ನು ನಿರಂತರವಾಗಿರಿಸಿಕೊಂಡ ನೆಲೆಯಲ್ಲಿ ನವರಾತ್ರಿ, ದಶಮಿಯ 10 ದಿನಗಳ ಕಾಲ ಪ್ರತಿದಿನ ಜೋಡಿ ಚಂಡಿಕಾಯಾಗಗಳು, ಜೋಡಿ ಲಲಿತಾ ಸಹಸ್ರ ಕದಳೀಯಾಗಗಳು ಸಮರ್ಪಿಸಲ್ಪಡುತ್ತಿವೆ. ನಾಲ್ಕನೇ ದಿನದಂದು ದೇವಿಯನ್ನು ಕೂಷ್ಮಾಂಡಿನಿ ದೇವಿಯಾಗಿ ಅಲಂಕರಿಸಿ ಪೂಜಿಸಲಾಯಿತು. ಪ್ರಬಲಾಕ್ಷ ಮತ್ತು ಮನೆಯವರು ಉಡುಪಿ ಹಾಗೂ ದೀಪಕ್ ಸುರತ್ಕಲ್ ಮತ್ತು ಮನೆಯವರಿಂದ ಜೋಡಿ ಚಂಡಿಕಾಯಾಗ, ಬಾಲಚಂದ್ರ ಸೊರಕೆ ಮತ್ತು ಮನೆಯವರು ಹಾಗೂ ಆದ್ಯಾ ಬಾಲಚಂದ್ರ ಸೊರಕೆ ಅವರಿಂದ ಜೋಡಿ ದುರ್ಗಾ ನಮಸ್ಕಾರ, ನಿತ್ಯಾ, ಕ್ಷಿತಿ, ಶ್ರಾವ್ಯಾ, ದ್ವಿತಿ, ಧನ್ವಿತಾ, ವಂಶಿ, ಸಂಹಿತಾ, ಸಾನ್ವಿ, ಕೃತಿಕಾ, ನಿಹಾಲಿ, ದೀಕ್ಷಾ, ಕ್ರಿತೀಕ್ಷಾ, ಅಬನಿ ಅವರು ದೇವಿಗೆ ಅಭಿಮುಖವಾಗಿ ನೃತ್ಯಸೇವೆ ಸಮರ್ಪಿಸಿದರು.
ಲಲಿತಾ ಕಲಾ ಬಳಗ ಉಡುಪಿ, ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಸಗ್ರಿನೋಳೆ, ಶ್ರೀಮಾತಾ ಭಜನ ಮಂಡಳಿ ಪೆರಂಪಳ್ಳಿ ಅವರಿಂದ ಭಜನೆ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮವಾಗಿ ಭ್ರಾಮರಿ ನಾಟ್ಯಾಲಯ ಉಡುಪಿ ಬಳಗವರಿಂದ ನೃತ್ಯ ವೈಭವ ನೆರವೇರಿತು. ನಿತ್ಯವೂ ವಿಶೇಷ ಭಕ್ಷ್ಯಗಳ ಅನ್ನಪ್ರಸಾದ ಬಡಿಸಲಾಗುತ್ತಿದೆ. ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

ಶರನ್ನವರಾತ್ರಿ 4ನೇ ದಿನ ದೇವಿಯನ್ನು ಕೂಷ್ಮಾಂಡಿನಿ ದೇವಿಯಾಗಿ ಅಲಂಕರಿಸಿ ಪೂಜಿಸಲಾಯಿತು.

ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ತುಲಾಭಾರ ಸೇವೆ ನಡೆಯಿತು.