ಮಂಗಳೂರು: “ನಮ್ಮ ಪೂರ್ವಜರು ನಿಗರ್ತಿಕ ಸ್ಥಿತಿಯಲ್ಲಿ ೧೫೬೦ರ ಬಳಿಕ ಕರಾವಳಿ ಕರ್ನಾಟಕ ಪ್ರದೇಶಕ್ಕೆ ಬಂದುತಲುಪಿದ್ದರು. ಹೊಟ್ಟೆಪಾಡಿಗೆ ಬೇಸಾಯವನ್ನುತಮ್ಮ ಕಸುಬಾಗಿಸಿದ್ದ ಅವರು ಕ್ರಮೇಣ ಅನೇಕ ವ್ಯಾಪಾರ ಉದ್ಯಮಗಳನ್ನು ನಡೆಸಿ ಸ್ವಧರ್ಮವನ್ನು ಕಾಪಾಡುವ ಕೆಲಸ ಮಾಡಿದರು. ಜಗತ್ತಿನ ನಾಲ್ಕು ದಿಕ್ಕುಗಳಲ್ಲಿ ಹರಡಿರುವ ಗೌಡ ಸಾರಸ್ವತ ಸಮಾಜ ಬಾಂಧವರಲ್ಲಿ ಹಲವರು ದೇವಸ್ಥಾನಗಳನ್ನು ನಿರ್ಮಿಸಿದರೆ ಕೆಲವರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಇನ್ನು ಕೆಲವರು ಜಿ ಎಸ್ ಬಿ ಸೇವಾ ಸಂಘದಂತಹ ಸೇವಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಇಷ್ಟೆಲ್ಲಾ ಸಾಧನೆ ಮಾಡಿದ ಸಮಾಜದಲ್ಲಿ ಮಾತೃಭಾಷೆಕೊಂಕಣಿ ಬಗ್ಗೆ ನಿರ್ಲಕ್ಷ ಕಾಣುತ್ತಿದೆ. ಇದು ಹೋಗಲಾಡಿಸಬೇಕು. ಇದನ್ನು ಸಾಧಿಸಲು ನಾವೆಲ್ಲಾ ಸೇರಿ ಕೆಲಸ ಮಾಡಬೇಕು”ಎಂದು ಡಾ. ಕಸ್ತೂರಿ ಮೋಹನ ಪೈ ಅವರು ತಮ್ಮಸ್ವಾಗತ ಭಾಷಣದಲ್ಲಿ ಮಾತನಾಡಿದರು.
ಇಲ್ಲಿಯ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ೮೭ನೇ ಸ್ಥಾಪನಾ ದಿನದಲ್ಲಿ ಅವರು ಮಾತನಾಡುತಿದ್ದರು. ಈ ಬಾರಿಯ ಸ್ಥಾಪನಾ ದಿನವನ್ನು ಸಮಾಜದ ಹಿರಿಯ ಸಂಸ್ಥೆಗಳಾದ ೫೦೦ ವರ್ಷಗಳನ್ನು ಪೂರೈಸುತ್ತಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಲಿ ಜೀವೋತ್ತಮ ಮಠ ಹಾಗೂ ೧೦೦ ವರ್ಷಗಳನ್ನು ಪೂರೈಸಿರುವ ಸಿಂಡಿಕೇಟ್ ಬ್ಯಾಂಕ್ (ಕೆನರಾ ಬ್ಯಾಂಕ್) ಇವುಗಳಿಗೆ ಅರ್ಪಿಸುತಿದ್ದೆವೆ ಎಂದು ಅವರು ತಿಳಿಸಿದರು.
ಖಜಾಂಚಿ ಕುಂಬ್ಳೆ ನರಸಿಂಹ ಪ್ರಭು ಅವರು ೫೫೦ ವರ್ಷ ಪೂರ್ಣಗೊಳಿಸುತ್ತಿರುವ ಗೋಕರ್ಣ ಮಠ ಹಾಗೂ ೧೦೦ ವರ್ಷ ಪೂರ್ಣ ಮಾಡಿರುವ ಸಿಂಡಿಕೇಟ್ ಬ್ಯಾಂಕ್ ಗಳ ಸಾಧನೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೊಂಕಣಿಕ ಕಥಾ ಅನುವಾದ, ಕೊಂಕಣಿ ಪದಗಳ ಬರವಣಿಗೆ, ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಮುಂತಾದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ನೀಡಲಾಯಿತು. ಎಸ್ಎಸ್ಎಲ್ಸಿಯಿಂದ ಸ್ನಾತಕೋತ್ತರವರೆಗಿನ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕ್ರೀಡೆ, ಆಟ, ಲಲಿತ ಕಲೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉತ್ಕೃಷ್ಟ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಪ್ರೇಮನಾಥ ಕುಡ್ವ “ಸಿಂಡಿಕೇಟ್ ಬ್ಯಾಂಕ್ ನ ಸ್ಥಾಪಕರಲ್ಲಿ ಓರ್ವರಾದ ವಿ ಎಸ್ ಕುಡ್ವ ಅವರ ಮೊಮ್ಮಗ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಡಾ. ಟಿ ಎಂ ಎ ಪೈ, ಉಪೇಂದ್ರ ಪೈ ಅವರಂತಹ ದಾರ್ಶನಿಕರು ಕನಸು ಕಂಡ ಕಾರಣ ಇಂದಿನ ಪೀಳಿಗೆ ಅತ್ಯಂತ ಹೆಚ್ಚಿನ ಪ್ರಯೋಜನ ಪಡೆದಿದೆ” ಎಂದು ಅವರು ಹೇಳಿದರು.
ಇನ್ನೋರ್ವ ಗೌರವಾನ್ವಿತ ಅತಿಥಿಗಳಾದ ಎಸ್. ಪಾಂಡುರಂಗ ಆಚಾರ್ಯ ಅವರು ಮಾತನಾಡುತ್ತಾ “ಇಂದಿನ ಪೀಳಿಗೆ ಶ್ರೇಷ್ಠ ಸಾಧನೆ ಮಾಡುವ ಧ್ಯೇಯಗಳನ್ನು ಹೊಂದಬೇಕು. ದೇವರ ನಾಮ ಜಪದೊಂದಿಗೆ ಮಾಡಿದ ಯಾವುದೇ ಕೆಲಸ ಸಫಲವಾಗುವುದು ಖಂಡಿತ”ಎಂದು ಹೇಳಿದರು.
ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಎ. ರಮೇಶ ಪೈ (ಜತೆ ಕಾರ್ಯದರ್ಶಿ), ಎಚ್. ವಿಜಯಚಂದ್ರ ಕಾಮತ್, ಜಿ. ಮಾಧವರಾಯ ಪ್ರಭು, ಬಿ. ಆರ್ ಶೆಣೈ, ಎಂ. ಆರ್. ಕಾಮತ್, ಶಾಂಭವಿ ಪ್ರಭು ಮತ್ತು ಮೋಹನದಾಸ ಪೈ ಉಪಸ್ಥಿತರಿದ್ದರು. ಎಂ. ಸುಬ್ರಾಯ ಪ್ರಭು ವಂದಿಸಿದರು. ಸುಚಿತ್ರಾ ಶೆಣೈಕಾರ್ಯಕ್ರಮ ನಿರ್ವಹಿಸಿದರು. ಪ್ರತಿಮಾ ಪ್ರಭು ಪ್ರಾರ್ಥಿಸಿದರು. ಗೋವಿಂದರಾಯ ಪ್ರಭು, ವಿನಾಯಕಕಾಮತ್, ವಿದ್ಯಾ ಪೈ, ಚಂದ್ರಿಕಾ ಮಲ್ಯ, ಗೀತಾ ಸಿ. ಕಿಣಿ, ಉಷಾ ಮೋಹನ್ ಪೈ, ವೆಂಕಟೇಶಎನ್. ಬಾಳಿಗಾ ಮತ್ತು ಪ್ರಕಾಶ ಭಕ್ತ ಸಹಕರಿಸಿದರು.

