ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಉಚ್ಚಿಲ ದಸರಾ ಪ್ರಯುಕ್ತ ಅ. 2 ರಂದು ಬೃಹತ್ ಶೋಭಾಯಾತ್ರೆ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ಸಾಗಲಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಒದಗಿಸುವ ದೃಷ್ಟಿಯಿಂದ ಮಾರ್ಗ ಬದಲಾವಣೆಯನ್ನು ಮಾಡಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿದ್ದಾರೆ.
ಉಡುಪಿ-& ಮಂಗಳೂರು ಮಾರ್ಗವಾಗಿ ಬರುವ ಘನ ವಾಹನಗಳು ಸಾಯಂಕಾಲ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬದಲಿ ಮಾರ್ಗವಾಗಿ ಕಟಪಾಡಿ- ಶಿರ್ವಾ -ಬೆಳ್ಳಣ್ -ಪಡುಬಿದ್ರಿ ಮಾರ್ಗವಾಗಿ ಸಂಚರಿಸಬೇಕು. ಉಡುಪಿ ಕಡೆಯಿಂದ ಬಜ್ಪೆ ಏರ್ಪೋರ್ಟ್ ಹೋಗುವ ವಾಹನಗಳು ಕಟಪಾಡಿ -ಶಿರ್ವಾ -ಬೆಳ್ಳಣ್ -ಮುಂಡ್ಕೂರು ಮಾರ್ಗವಾಗಿ ಸಂಚರಿಸಬೇಕು. ಟ್ರಕ್, ಲಾರಿ, ಟ್ಯಾಂಕರ್ ಮುಂತಾದ ಘನ ವಾಹನಗಳನ್ನು ರಾತ್ರಿ 9 ಗಂಟೆಯವರೆಗೆ ಕುಂದಾಪುರ, ಉಡುಪಿ ಕಡೆಗಳಲ್ಲಿ ಟ್ರಕ್ ಬೇಯಲ್ಲಿ ನಿಲ್ಲಿಸಿ ನಂತರ ಸಂಚಾರ ಮುಂದುವರಿಸಬೇಕು.
ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಸಂಚರಿಸುವ ರಾತ್ರಿ ಪುಯಾಣಿಕ ಬಸ್ಸುಗಳು ರಾತ್ರಿ 9 ಗಂಟೆ ನಂತರ ಉಡುಪಿಯಿಂದ ಸಂಚರಿಸಬೇಕು. ಮಂಗಳೂರು&-ಉಡುಪಿ ಮಾರ್ಗವಾಗಿ ಸಾಗುವ ಘನ ವಾಹನಗಳಿಗೆ ಸಾಯಂಕಾಲ 5 ರಿಂದ ರಾತ್ರಿ 10 ಗಂಟೆವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.